

ಬೆಂಗಳೂರು: ಚಿತ್ರ ಪಾತ್ರಕ್ಕೆ ಧ್ರುವ ಡಬ್ ಮಾಡ್ತಾರಾ?... ಕಳೆದ ಕೆಲವು ದಿನಗಳಿಂದ ಕನ್ನಡ ಚಿತ್ರರಂಗದಲ್ಲಿ ಈ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಈಗ ಕೊನೆಗೂ ಉತ್ತರ ಸಿಕ್ಕಿದ್ದು, ‘ರಾಜ ಮಾರ್ತಾಂಡ’ ಚಿತ್ರದ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅವರ ಕುಟುಂಬದ ಆಪ್ತ ಶಿವಾರ್ಜುನ್ ಹೇಳಿದ್ದಾರೆ. ಮುಂದಿನ ತಿಂಗಳು ಡಬ್ಬಿಂಗ್ ನಡೆಯುವ ಸಾಧ್ಯತೆ ಇದೆ.
ಚಿರಂಜೀವಿ ಸರ್ಜಾ ನಿಧನರಾದ ಮೇಲೆ ಎಲ್ಲೆಡೆ ಕೇಳಿ ಬಂದ ಅತೀ ಮುಖ್ಯವಾದ ಪ್ರಶ್ನೆಯೆಂದರೆ, ಅವರು ಒಪ್ಪಿಕೊಂಡಿದ್ದ ಚಿತ್ರಗಳ ಕಥೆಯೇನು ಎಂದು. ಈ ಪೈಕಿ ‘ಏಪ್ರಿಲ್’ ಚಿತ್ರದ ಮುಹೂರ್ತವಾಗಿದ್ದರೂ, ಚಿತ್ರೀಕರಣ ಶುರುವಾಗಿರಲಿಲ್ಲ. ಹಾಗಾಗಿ ಆ ಚಿತ್ರದ ಸಮಸ್ಯೆ ಇಲ್ಲ. ಇದಲ್ಲದೆ, ‘ರಾಜ ಮಾರ್ತಾಂಡ’ ಮತ್ತು ‘ಕ್ಷತ್ರಿಯ’ ಎಂಬ ಎರಡು ಚಿತ್ರಗಳಲ್ಲಿ ಚಿರು ಒಪ್ಪಿಕೊಂಡಿದ್ದರು. ‘ಕ್ಷತ್ರಿಯ’ ಚಿತ್ರದ ಶೇ 60 ಭಾಗದಷ್ಟು ಚಿತ್ರೀಕರಣ ಮುಗಿದಿದ್ದರೆ, ‘ರಾಜ ಮಾರ್ತಾಂಡ’ ಚಿತ್ರದ ಒಂದು ಹಾಡು ಮತ್ತು ಚಿರು ಭಾಗದ ಡಬ್ಬಿಂಗ್ ಮಾತ್ರ ಬಾಕಿ ಇತ್ತು. ಈಗ ಡಬ್ಬಿಂಗ್ ಕೆಲಸವನ್ನು ಧ್ರುವ ಮುಗಿಸಿಕೊಡುತ್ತಾರಂತೆ. ಈ ಹಿಂದೆ, ಶಂಕರ್ ನಾಗ್ ಅವರು ನಿಧನರಾದಾಗ, ‘ನಿಗೂಢ ರಹಸ್ಯ’ ಚಿತ್ರಕ್ಕೆ ಅನಂತ್ ನಾಗ್ ಡಬ್ಬಿಂಗ್ ಮಾಡಿಕೊಟ್ಟಿದ್ದರು.
ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ರಾಜ ಮಾರ್ತಾಂಡ’ ಚಿತ್ರಕ್ಕೆ ಧ್ರುವ ಡಬ್ಬಿಂಗ್ ಮಾಡಿಕೊಡಲಿದ್ದಾರೆ. ಇನ್ನು ‘ಕ್ಷತ್ರಿಯ’ ಚಿತ್ರತಂಡದ ಜತೆಗೆ ಮೀಟಿಂಗ್ ಆಗಬೇಕಿದೆ. ಜುಲೈ ಒಂದರ ನಂತರ ಒಟ್ಟಿಗೆ ಕೂತು, ಮುಂದಿನ ನಡೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ’ ಎಂದು ಅವರು ಹೇಳುತ್ತಾರೆ.
ಇನ್ನು, ಲಾಕ್ಡೌನ್ಗಿಂಥ ಮುಂಚೆ ಬಿಡುಗಡೆಯಾಗಿದ್ದ ‘ಶಿವಾರ್ಜುನ’ ಮತ್ತೊಮ್ಮೆ ಬಿಡುಗಡೆಯಾಗಲಿದೆಯಂತೆ. ಆ ಚಿತ್ರದ ನಿರ್ವಪಕರೂ ಆಗಿರುವ ಶಿವಾರ್ಜುನ್, ‘ಚಿತ್ರ ಬಿಡುಗಡೆಯಾದ ಮರುದಿನದಿಂದ ಲಾಕ್ಡೌನ್ ಜಾರಿಗೆ ಬಂತು. ಹಲವು ಚಿತ್ರಮಂದಿರಗಳ ಎದುರು ಇನ್ನೂ ಚಿತ್ರದ ಕಟೌಟ್ ಮತ್ತು ಪೋಸ್ಟರ್ಗಳು ಹಾಗೆಯೇ ಇವೆ. ಹಾಗಾಗಿ ಚಿತ್ರ ಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆಯೇ, ಚಿತ್ರವನ್ನು ಮರುಬಿಡುಗಡೆ ಮಾಡಲಾಗುತ್ತದೆ’ ಎನ್ನುತ್ತಾರೆ ಶಿವಾರ್ಜುನ್.