

ಬೆಂಗಳೂರು: ‘ಪ್ರೇಮಬರಹ’ ಬಿಡುಗಡೆಗೊಂಡು ಆರು ವರ್ಷಗಳ ಬಳಿಕ ಅರ್ಜುನ್ ಸರ್ಜಾ ‘ಸೀತಾ ಪಯಣ’ ಚಿತ್ರದ ಮೂಲಕ ಮತ್ತೊಮ್ಮೆ ನಿರ್ದೇಶನಕ್ಕಿಳಿದಿರುವ ವಿಚಾರ ಗೊತ್ತೇ ಇದೆ. ಈ ಚಿತ್ರದಲ್ಲಿ ‘ನಮ್ಮ ಹುಡುಗರು’ ಖ್ಯಾತಿಯ, ನಟ ಉಪೇಂದ್ರ ಅಣ್ಣನ ಮಗನ ನಿರಂಜನ್ ಸುಧೀಂದ್ರ ಮುಖ್ಯಭೂಮಿಕೆಯಲ್ಲಿದ್ದು, ಅವರಿಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಜೋಡಿಯಾಗಿದ್ದಾರೆ. ಸತ್ಯರಾಜ್, ಪ್ರಕಾಶ್ ರಾಜ್ ಕಲಾಬಳಗದಲ್ಲಿದ್ದಾರೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡವು ಬಿಡುಗಡೆಗೆ ಸಿದ್ಧವಾಗಿದೆ. ಇದೀಗ ಚಿತ್ರತಂಡದಿಂದ ಬಿಗ್ ಅಪ್‌ಡೇಟ್ ದೊರೆತಿದೆ. ‘ಸೀತಾ ಪಯಣ’ ಚಿತ್ರದಲ್ಲಿ ನಟ ಧ್ರುವ ಸರ್ಜಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಮನವಮಿ ದಿನದಂದು ಧ್ರುವ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ತಂಡ ಬಿಡುಗಡೆಗೊಳಿಸಿದೆ. ಧ್ರುವ ಸರ್ಜಾ ಪಾತ್ರದ ಬಗ್ಗೆ ನಿರ್ದೇಶಕ ಅರ್ಜುನ್ ಸರ್ಜಾ ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ‘ಹೌದು, ಧ್ರುವ ನಮ್ಮ ಸಿನಿಮಾದಲ್ಲಿ ‘ಪವನ್’ ಎಂಬ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕೇವಲ ಅತಿಥಿಯಾಗಿ ಬಂದು ಕೇವಲ ಒಂದೆರಡು ದೃಶ್ಯಕ್ಕೆ ಸೀಮಿತವಾಗಿವ ಪಾತ್ರವಲ್ಲ. ಬದಲಾಗಿ, ಒಂದು ಪಾತ್ರದಲ್ಲಿ ಧ್ರುವ ನಟಿಸುತ್ತಿದ್ದಾರೆ. ಇಲ್ಲಿ ಅವರ ಕ್ಯಾರೆಕ್ಟರ್ ಚೆನ್ನಾಗಿ ಮೂಡಿಬಂದಿದೆ’ ಎಂದು ಮಾಹಿತಿ ನೀಡಿದರು.
ನಾನು ಈವರೆಗೂ 10ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದೇನೆ. ಆದರೆ, ಈತರದ ಕಥೆಯನ್ನು ನಾನು ಮಾಡಿರುವುದು ಇದೇ ಮೊದಲು. ನನಗೆ ವಿಶೇಷ ಅನುಭವ ನೀಡಿದಂತಹ ಸಿನಿಮಾ ಇದು. ಇದೊಂದು ಅದ್ಭುತ ಕಥೆಯಾಗಿದ್ದು, ಅಷ್ಟೇ ಅತ್ಯುತ್ತಮವಾಗಿ ಮೂಡಿಬರುತ್ತಿದೆ. ಎಲ್ಲ ವಯೋಮಾನದವರಿಗೆ ಹತ್ತಿರವಾಗುವ ಅಂಶಗಳು ಇಲ್ಲಿವೆ. ಹೀಗಾಗಿ ಈ ಸಿನಿಮಾ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ಅರ್ಜುನ್ ಸರ್ಜಾ, ನಟ-ನಿರ್ದೇಶಕ