ಅಣ್ಣ ನನ್ನ ಜತೆಲೇ ಇದ್ದಾನೆ; ದಶಕದ ಸಂಭ್ರಮದಲ್ಲಿ ಧ್ರುವ..

Dhruva
Published on
10 ವರ್ಷ, ನಾಲ್ಕು ಚಿತ್ರ. ನಾಲ್ಕೂ ಚಿತ್ರಗಳು ಹಿಟ್. ಇದು ನಟ ಧ್ರುವ ಸರ್ಜಾ ಅವರ ಬಾಕ್ಸಾಫೀಸ್ ಮಾರ್ಕ್ಸ್ ಶೀಟ್. ಕೇವಲ ನಾಲ್ಕು ಚಿತ್ರಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದ ಕೆಲವೇ ಕಲಾವಿದರಲ್ಲಿ ಧ್ರುವ ಕೂಡ ಒಬ್ಬರು. ಇಂತಹ ಸರ್ಜಾ ಕುಟುಂಬದ ಕುಡಿ ಈಗ ಚಿತ್ರರಂಗದಲ್ಲಿ ದಶಕ ಪೂರೈಸಿದ್ದಾರೆ. ಇದೇ ಖುಷಿಯಲ್ಲಿ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ ಧ್ರುವ ಸರ್ಜಾ.

| ಹರ್ಷವರ್ಧನ್ ಬ್ಯಾಡನೂರು

  • ಹೇಗಿತ್ತು 10 ವರ್ಷಗಳ ಸಿನಿಪಯಣ?

10 ವರ್ಷ ಆಗಿದ್ದೇ ಗೊತ್ತಾಗಿಲ್ಲ. ಒಳ್ಳೆಯ ಅನುಭವಗಳಾಗಿವೆ. ಯಶಸ್ಸಿಗೆ ಶಾರ್ಟ್ ಕಟ್ ಇಲ್ಲ, ಕಷ್ಟ ಪಟ್ಟರೇನೇ ಇಲ್ಲಿ ಉಳಿಯೋಕೆ ಸಾಧ್ಯ ಎಂಬುದು ಗೊತ್ತಾಗಿದೆ.

  • ಒಂದು ದಶಕದ ಜರ್ನಿಯಲ್ಲಿ ನೀವು ಕಲಿತಿದ್ದೇನು?

ಈಗಂತೂ ನಾನು ಕ್ವಾಲಿಟಿ ಸಿನಿಮಾಗಳನ್ನೇ ಒಪ್ಪಿಕೊಳ್ಳುತ್ತಿರುವುದು. ಒಳ್ಳೆಯ ಕಂಟೆಂಟ್ ಇರುವ ಒಳ್ಳೆಯ ಸಿನಿಮಾಗಳನ್ನು, ಜನರು ಇಷ್ಟಪಡುವ ಸಿನಿಮಾಗಳನ್ನು ಮಾಡಬೇಕು. ನನಗೆ ಮನೆಯಲ್ಲೂ ಅಷ್ಟೇ ಸಿನಿಮಾ ಮಾಡು, ಇಷ್ಟೇ ಸಿನಿಮಾ ಮಾಡು ಎಂಬ ಒತ್ತಡವಿಲ್ಲ. ಹೀಗಾಗಿಯೇ ಪ್ರತಿ ಬಾರಿಯೂ ಉತ್ತಮ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತೇನೆ.

  • ಈ 10 ವರ್ಷಗಳಲ್ಲಿ ಹಲವು ಏರಿಳಿತಗಳನ್ನೂ ನೋಡಿದ್ದೀರಿ?

ಚಿತ್ರರಂಗ ಮಾತ್ರವಲ್ಲ ಯಾವುದೇ ಕ್ಷೇತ್ರದಲ್ಲೂ ಏರಿಳಿತಗಳು ಇದ್ದೇ ಇರುತ್ತವೆ. ಸೋಲಿಗೆ ಕುಗ್ಗಬಾರದು, ಗೆಲುವಿಗೆ ಹಿಗ್ಗಬಾರದು. ನಮ್ಮ ಪಾಡಿಗೆ ನಾವು ಕೆಲಸ ಮಾಡಿಕೊಂಡು ಸಾಗುತ್ತಿರಬೇಕು ಎಂಬುದು ನನ್ನ ನಂಬಿಕೆ

  • ‘ಮಾರ್ಟಿನ್’ ಯಾವ ಹಂತದಲ್ಲಿದೆ?

‘ಮಾರ್ಟಿನ್’ ಶೇಕಡಾ 85ರಷ್ಟು ಚಿತ್ರೀಕರಣ ಮುಗಿದಿದೆ. 25 ದಿನಗಳ ಚಿತ್ರೀಕರಣವಾದರೆ ಪೂರ್ಣಗೊಳ್ಳುತ್ತದೆ. ಸೆಪ್ಟೆಂಬರ್ 30ರಂದು ಸಿನಿಮಾ ರಿಲೀಸ್ ಅಂತ ಘೋಷಣೆ ಮಾಡಿದ್ದೇವೆ. ಅದರಂತೆ ರಿಲೀಸ್ ಮಾಡಲಿದ್ದೇವೆ. ಲವ್, ಆಕ್ಷನ್, ಥ್ರಿಲ್... ಹೀಗೆ ಎಲ್ಲ ತರಹದ ಅಂಶಗಳಿರುವ ಚಿತ್ರಗಳೇ ‘ಮಾರ್ಟಿನ್’.

  • ನಿಮ್ಮನ್ನು ಹೆಚ್ಚೆಚ್ಚು ತೆರೆ ಮೇಲೆ ನೋಡಬೇಕು ಅಂತ ಅಭಿಮಾನಿಗಳಿಗೆ ಆಸೆ...

ಇನ್ನು ಮುಂದೆ ಅಭಿಮಾನಿಗಳು ವರ್ಷಕ್ಕೆ ಎರಡು ಚಿತ್ರಗಳನ್ನು ನನ್ನಿಂದ ನಿರೀಕ್ಷೆ ಮಾಡಬಹುದು. ‘ಮಾರ್ಟಿನ್’ ಬಳಿಕ ಪ್ರೇಮ್ ಸಾರ್ ಜತೆ ಸಿನಿಮಾ ಮಾಡುತ್ತಿದ್ದೇನೆ. ಆ ಚಿತ್ರದ ಮುಹೂ ರ್ತವೂ ಆಗಿದೆ. 70ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರಿತ ಲವ್-ರೌಡಿಸಂ ಕಥೆ.

  • ಒಂದು ದಶಕ ಪೂರೈಸಿದ್ದೀರಿ, ಈ ಸಮಯದಲ್ಲಿ ಅಣ್ಣ ಚಿರು ಸಪೋರ್ಟ್​ಅನ್ನು ಹೇಗೆ ನೆನಪಿಸಿಕೊಳ್ಳುತ್ತೀರಿ?

ಅಣ್ಣ... ಯಾವಾಗಲೂ ನನ್ನ ಜತೆಯಲ್ಲೇ ಇರ್ತಾನೆ. ಮೊದಲ ಸಿನಿಮಾದಿಂದ ಮಾರ್ಟಿನ್​ವರೆಗೂ ಅಣ್ಣ ಜತೆಯಲ್ಲೇ ಇದ್ದಾನೆ. ಮೊದಲು ನೈತಿಕ ಬೆಂಬಲ ನೀಡುತ್ತಿದ್ದ, ಈಗ ಮಾನಸಿಕವಾಗಿ ಬೆಂಬಲ ನೀಡುತ್ತಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net