ನೀರ್ ದೋಸೆ ಚಿತ್ರದ ಕುಮುದ ಆಗಿ ಧೂಮಲೀಲೆ ಮಾಡಿದ್ದನ್ನು ನೆನಪಿಸಿಕೊಂಡ ಹರಿಪ್ರಿಯಾ

page 10 2
Published on

ಲಾಕ್​ಡೌನ್ ಸಮಯವನ್ನು ಬ್ಲಾಗ್ ಬರೆಯುವುದರಲ್ಲಿ, ಹರಿಪ್ರಿಯಾ ತೊಡಗಿಸಿ ಕೊಂಡಿದ್ದಾರೆ. ತಮ್ಮ ಜೀವನದಲ್ಲಾದ ಹಲವು ಘಟನೆಗಳನ್ನು, ನೆನಪುಗಳನ್ನು ಅವರು ಮೆಲುಕು ಹಾಕುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ನೀರ್ ದೋಸೆ’ ಚಿತ್ರದ ಸಂದರ್ಭದಲ್ಲಾದ ಕೆಲವು ಸ್ವಾರಸ್ಯಕರ ಸಂಗತಿಗಳ ಬಗ್ಗೆ ಇತ್ತೀಚೆಗೆ ತಮ್ಮ ಬೇಬ್​ನೋಸ್​ ಡಾಟ್​ಕಾಮ್​ನಲ್ಲಿ ಅವರು ವಿವರವಾಗಿ ಬರೆದಿದ್ದಾರೆ. ಆ ಚಿತ್ರದಲ್ಲಿ ಹರಿಪ್ರಿಯಾ ಕುಮುದ ಎಂಬ ಪಾತ್ರ ಮಾಡಿದ್ದರು. ಗ್ಲಾಮರಸ್ ಅಷ್ಟೇ ಅಲ್ಲ, ಸದಾ ಸಿಗರೇಟ್ ಸೇದುವ ಹುಡುಗಿಯಾಗಿ ಅವರು ಕಾಣಿಸಿಕೊಂಡಿದ್ದರು. ಪ್ರತಿ ಹೊಸ ಚಿತ್ರ ಒಪ್ಪಿಕೊಂಡಾಗಲೂ, ಪಾತ್ರ ನೈಜವಾಗಿ ಬರಬೇಕು ಎಂಬ ದೃಷ್ಟಿಯಿಂದ ಆ ಪಾತ್ರಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಕಲಿಯುವುದನ್ನು ಹರಿಪ್ರಿಯಾ ಪಾಲಿಸಿಕೊಂಡು ಬಂದಿದ್ದಾರಂತೆ. ಅದೇ ರೀತಿ, ಕುಮುದಾ ಪಾತ್ರ ಸಿಗರೇಟ್ ಸೇದುವುದರಿಂದ, ಆ ದೃಶ್ಯಗಳು ನೈಜವಾಗಿ ಬರಲಿ ಎಂದು ಸಿಗರೇಟು ಸೇದುವುದನ್ನು ಕಲಿತರಂತೆ ಹರಿಪ್ರಿಯಾ. ಈ ಸಿಗರೇಟ್ ಸೇದುವ ಅನುಭವ ಹೇಗಿತ್ತು ಎಂದು ಬೇಬ್​ನೋಸ್​ ಡಾಟ್​ಕಾಮ್​ನಲ್ಲಿ ಅವರು ವರ್ಣಿಸಿದ್ದಾರೆ.

ಜೀವನದಲ್ಲಿ ತಾನೆಂದಾದರೂ ಕೈಯಲ್ಲಿ ಸಿಗರೇಟ್ ಹಿಡಿಯಬಹುದು ಎಂದು ಹರಿಪ್ರಿಯಾ ಯಾವತ್ತೂ ಯೋಚಿಸಿರಲಿಲ್ಲವಂತೆ. ಆದರೆ, ಆ ಚಿತ್ರಕ್ಕೆ ಸಿಗರೇಟ್ ಸೇದಬೇಕಾಗಿ ಬಂದಿದೆ. ಅದಕ್ಕೆ ಅವರು ಸಹಾಯ ಪಡೆದಿದ್ದು ಯಾರಿಂದ ಗೊತ್ತಾ? ತಮ್ಮ ಸಹೋದರ ಮತ್ತು ಅವರ ಸ್ನೇಹಿತರಿಂದ. ವಿಚಿತ್ರ ಎಂದರೆ, ಹರಿಪ್ರಿಯಾ ಯಾವಾಗಲೂ ಅವರಿಗೆ ಸಿಗರೇಟು ಬಿಡುವಂತೆ ಹೇಳುತ್ತಿದ್ದರಂತೆ. ‘ಪ್ರತಿ ಸಂಜೆ, ನಾನು ನನ್ನ ಸಹೋದರ ಇಬ್ಬರೂ ಟೆರೇಸ್​ಗೆ ಹೋಗಿ, ಅಲ್ಲಿ ಅಕ್ಕಪಕ್ಕದವರಿಗೆ ಕಾಣದಂತೆ ಸಿಗರೇಟು ಸೇದುತ್ತಿದ್ದೆವು. ಕೊನೆಗೆ ಸಿಗರೇಟು ಹೇಗೆ ಹಿಡಿಯಬೇಕು ಎಂದು ಕಲಿತೆ. ನಾವು ಟೆರೇಸ್​ಗೆ ಹೋಗುವಾಗಲೆಲ್ಲಾ, ‘ಸಿಗರೇಟ್ ಸೇದುವುದಕ್ಕೆ ಹೋಗುತ್ತಿದ್ದೇವೆ’ ಅಂತ ಅಮ್ಮನಿಗೆ ಹೇಳುತ್ತಿದ್ದೆ. ಅದನ್ನು ಕೇಳಿ ಅಮ್ಮನಿಗೆ ವಿಪರೀತ ಸಿಟ್ಟು ಬರುತಿತ್ತು. ಆದರೆ, ಪಾತ್ರಕ್ಕಾಗಿ ಅವೆಲ್ಲಾ ಎಂದು ಸುಮ್ಮನಿದ್ದರು. ಇದನ್ನೇ ಅಭ್ಯಾಸ ಮಾಡಿಕೊಳ್ಳಬೇಡ ಎಂದು ಯಾವಾಗಲೂ ಹೇಳುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಹರಿಪ್ರಿಯಾ.

ಇನ್ನು ಚಿತ್ರದಲ್ಲಿ, ಹರಿಪ್ರಿಯಾ ಬಾಥ್​ಟಬ್​ನಲ್ಲಿ ಮಲಗಿರುವ ಒಂದು ದೃಶ್ಯವಿದೆ. ಅದೊಂದು ದೊಡ್ಡ ದೃಶ್ಯವಾದ್ದರಿಂದ, ಬಾಥ್​ಟಬ್​ನಲ್ಲೇ ಇರಬೇಕಿತ್ತಂತೆ. ಆ ದೃಶ್ಯ ಮುಗಿಯುವವರೆಗೂ ಹರಿಪ್ರಿಯಾ ಬಿಡದೆ ಸಿಗರೇಟು ಸೇದಬೇಕಿತ್ತಂತೆ. ಆ ದೃಶ್ಯದ ಚಿತ್ರೀಕರಣ ಮುಗಿದು, ಬಾಥ್​ಟಬ್​ನಿಂದ ಹೊರಬರುವಾಗ, ಅಲ್ಲಿ ಸುಮಾರು ಎರಡು ಪ್ಯಾಕ್​ಗಾಗುವಷ್ಟು ಸಿಗರೇಟು ಬಿದ್ದಿದ್ದನ್ನು ನೋಡಿ ಹರಿಪ್ರಿಯಾ ಶಾಕ್ ಆಗಿದ್ದರಂತೆ.

‘ಅದ್ಹೇಗೆ ಜನ ಸಿಗರೇಟು ಸೇದುತ್ತಾರೋ ಗೊತ್ತಿಲ್ಲ. ನನಗಂತೂ ಸಾಕಾಗಿ ಹೋಯಿತು. ಚಿತ್ರದುದ್ದಕ್ಕೂ ಕೆಮ್ಮುತ್ತಲೇ ಇದ್ದೆ ಮತ್ತು ಯಾವಾಗಲೂ ಗಂಟಲು ನೋವು ಕಾಡುತಿತ್ತು. ನನಗೆ ಆ ವಾಸನೆಯೇ ಆಗುತ್ತಿರಲಿಲ್ಲ. ಚಿತ್ರೀಕರಣದ ಕೊನೆಯ ದಿನವೇ ಕೊನೆ, ಆ ನಂತರ ಸಿಗರೇಟ್ ಮುಟ್ಟಿಲ್ಲ. ಅದರಿಂದ ಬಹಳ ಕೆಟ್ಟ ಪರಿಣಾಮ ಎದುರಿಸ ಬೇಕಾಯಿತು. ಇದರಿಂದ ಮೈಗ್ರೇನ್ ಹೆಚ್ಚಾಯಿತು. ಚಿತ್ರ ಬಿಡುಗಡೆಯಾಗಿ ನಾಲ್ಕು ವರ್ಷಗಳಾದರೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇದ್ದೀನಿ. ಆದರೆ, ಆ ಚಿತ್ರದಿಂದ ಸಿಕ್ಕ ಮೆಚ್ಚುಗೆ, ಎಲ್ಲಾ ಬೇಸರಗಳನ್ನೂ ಮರೆಯುವುಂತೆ ಮಾಡಿತು’ ಎಂದು ಬರೆದುಕೊಂಡಿದ್ದಾರೆ ಹರಿಪ್ರಿಯಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net