

ಬೆಂಗಳೂರು: ಕನ್ನಡದ ‘ವೇದ’, ‘ಭೈರತಿ ರಣಗಲ್’ ಸಿನಿಮಾಗಳನ್ನು ನಿರ್ಮಿಸಿದ್ದ ‘ಗೀತಾ ಪಿಕ್ಚರ್ಸ್’ ಬ್ಯಾನರ್‌ನಲ್ಲಿ ನ.14ರಂದು ಮೂರನೇ ಚಿತ್ರ ‘ಎ ಫಾರ್ ಆನಂದ್’ ಘೋಷಣೆಯಾಗಿತ್ತು. ಈ ಚಿತ್ರದಲ್ಲಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಇದೀಗ, ನಿರ್ಮಾಣ ಸಂಸ್ಥೆಯು ತನ್ನ 4ನೇ ಸಿನಿಮಾ ೋಷಿಸಿದೆ. ಈ ಹಿಂದಿನ ಮೂರು ಸಿನಿಮಾಗಳಲ್ಲಿ ಶಿವರಾಜಕುಮಾರ್ ಕಾಣಿಸಿಕೊಂಡಿದ್ದರೆ, ಈ ಹೊಸ ಚಿತ್ರದಲ್ಲಿ ‘ದೊಡ್ಮನೆ ಕುಡಿ’ ಧೀರೇನ್ ರಾಮ್‌ಕುಮಾರ್ ಅಭಿನಯಿಸಲಿದ್ದಾರೆ. ಶುಕ್ರವಾರ (ಡಿ. 6) ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಹೊಸ ಚಿತ್ರ ಘೋಷಣೆ ಮಾಡಲಾಯಿತು. ‘ಶಿವ 143’ ಮೂಲಕ ಬಣ್ಣದ ಲೋಕಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ್ದ ಧೀರೇನ್‌ಗೆ ಇದು ಎರಡನೇ ಸಿನಿಮಾ. ‘ಶಾಖಾಹಾರಿ’ ನಿರ್ದೇಶಕ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ. ಚಿತ್ರದ ತಾರಾಗಣ, ತಾಂತ್ರಿಕ ವರ್ಗ ಸೇರಿ ಉಳಿದ ವಿಚಾರಗಳನ್ನು ತಂಡ ಇನ್ನಷ್ಟೇ ಬಹಿರಂಗಪಡಿಸಬೇಕಿದೆ.
ಕ್ರೈಮ್ ಥ್ರಿಲ್ಲರ್ ಕಥಾಹಂದರ: ‘ಶಾಖಾಹಾರಿ’ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸಂದೀಪ್ ಸುಂಕದ್ ಇದೀಗ ಎರಡನೇ ಬಾರಿಗೆ ಡೈರಕ್ಟರ್ ಕ್ಯಾಪ್ ಧರಿಸುತ್ತಿದ್ದಾರೆ. ಈ ಬಗ್ಗೆ ಅವರು, ‘ಕೆಲ ತಿಂಗಳಿಂದ ಕಥೆಯ ಚರ್ಚೆ ನಡೆಯುತ್ತಿತ್ತು. ಶಿವಣ್ಣ ಮತ್ತು ಗೀತಕ್ಕ ಬಳಿ ಈ ಕಥೆ ಹೇಳಿದಾಗ, ಅವರು ಇಷ್ಟಪಟ್ಟು, ಚಿತ್ರ ನಿರ್ಮಾಣಕ್ಕೆ ಒಪ್ಪಿದರು. ಇಂತಹ ದೊಡ್ಡ ಬ್ಯಾನರ್ ಜತೆ ಎಷ್ಟೋ ನಿರ್ದೇಶಕರಿಗೆ ಕೆಲಸ ಮಾಡುವ ಆಸೆ ಇರುತ್ತದೆ. ನನ್ನ ಎರಡನೇ ಸಿನಿಮಾಕ್ಕೆ ಈ ಅವಕಾಶ ದೊರೆತಿದ್ದಕ್ಕೆ ಆಭಾರಿಯಾಗಿದ್ದೇನೆ. ಇದೊಂದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರ. ಸದ್ಯ ಪ್ರಿ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರಕಥೆ ಅಂತಿಮವಾದ ಕೂಡಲೇ ಶೂಟಿಂಗ್ ದಿನಾಂಕ ನಿರ್ಧರಿಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.
ಗ್ಯಾಪ್ ಬಳಿಕ ಧೀರೇನ್ ಅಂಕಣಕ್ಕೆ: ‘ಶಿವ 143’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದ ಧೀರೇನ್ ರಾಮ್‌ಕುಮಾರ್ ಎರಡೂವರೆ ವರ್ಷಗಳ ಗ್ಯಾಪ್ ಬಳಿಕ ಎರಡನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ, ‘ನನ್ನ ಡೆಬ್ಯೂ ನಂತರ ನನಗೆ ನನ್ನ ಪ್ರತಿಭೆಯನ್ನು ತೋರಿಸುವ ಚಿತ್ರ ಮಾಡಬೇಕೆಂಬ ಕನಸಿತ್ತು. ಈ ಸಮಯದಲ್ಲಿ ಹಲವು ಆರ್‌ಗಳು ಬಂದರೂ, ನಿರಾಕರಿಸಿ, ಕಲಾವಿದನಾಗಿ ಮತ್ತಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಅದೇ ಸಮಯದಲ್ಲಿ ಸಂದೀಪ್ ಹೇಳಿದ ಕಥೆ ಕೇಳಿ ಸಂತೋಷವಾಯ್ತು. ‘ಶಾಖಾಹಾರಿ’ ಕರ್ನಾಟಕದಲ್ಲಿ ಮಾತ್ರವಲ್ಲದೇ, ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಹೊರ ರಾಜ್ಯಗಳಲ್ಲೂ ಹೆಸರು ಮಾಡಿತ್ತು. ಅವರ ಜತೆ ಕೆಲಸ ಮಾಡುವ ಖುಷಿಯಿದೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.