dheera bhagathroy review: ಭೂಮಿ ಹಕ್ಕಿಗೆ ‘ಧೀರ’ನ ಹೋರಾಟ

662cb13f-61a8-466b-abaf-6927172233d4
Published on

ಚಿತ್ರ: ಧೀರ ಭಗತ್‌ರಾಯ್

ನಿರ್ದೇಶನ: ಕರ್ಣನ್

ನಿರ್ಮಾಣ: ಅಶೋಕ್, ಪ್ರವೀಣ್

ತಾರಾಗಣ: ರಾಕೇಶ್ ದಳವಾಯಿ, ಸುಚರಿತಾ ಸಹಾಯರಾಜ್, ಶರತ್ ಲೋಹಿತಾಶ್ವ, ಮಠ ಕೊಪ್ಪಳ, ನೀನಾಸಂ ಅಶ್ವತ್ಥ್ ಮತ್ತಿತರರು

ಶಿವ ಸ್ಥಾವರಮಠ

ಭೂ ಹಕ್ಕಿಗಾಗಿ ರಾಜ್ಯದ ರೈತರು ನಡೆಸಿದ ಹೋರಾಟಗಳಿಗೆ ಒಂದು ಇತಿಹಾಸವಿದೆ. ಅದರಲ್ಲಿ ಸಾಕಷ್ಟು ರೈತರು ನೋವು, ಅವಮಾನ ಅನುಭವಿಸಿ, ರಕ್ತ ಹರಿಸಿದ್ದಾರೆ. ಇಂತಹದ್ದೇ ಒಂದು ಐತಿಹಾಸಿಕ ಚರಿತ್ರೆಯನ್ನು ನಿರ್ದೇಶಕ ಕರ್ಣನ್ ‘ಧೀರ ಭಗತ್‌ರಾಯ್’ನಲ್ಲಿ ಚಿತ್ರಿಸಿದ್ದಾರೆ.

ಕಾನೂನು ಓದುತ್ತಿರುವ ರಾಜನ್ (ರಾಕೇಶ್ ದಳವಾಯಿ) ಮೂರು ದಿನಗಳ ಮಟ್ಟಿಗೆ ನರಗುಂದ ಗ್ರಾಮಕ್ಕೆ ಬರುತ್ತಾನೆ. ಈ ಗ್ರಾಮದಲ್ಲಿ ಆತನ ತಂದೆಯ ಹೋರಾಟದ ನೆನಪುಗಳಿವೆ. ಜನರ ಬಲಿದಾನದ ಕಥೆಯಿದೆ. ಉತ್ಸಾಹಿ ರಾಜನ್‌ಗೆ ತಂದೆಯಂತೆ ತಾನು ಕೂಡ ರೈತರಿಗೆ ಒಳಿತು ಮಾಡಬೇಕು ಹಾಗೂ ಅವರಿಂದ ಕಿತ್ತುಕೊಂಡಿರುವ ಭೂಮಿಯನ್ನು ಮತ್ತೆ ಅವರಿಗೆ ಮರಳಿಸಬೇಕು ಎಂದು ಹೋರಾಟಕ್ಕಿಳಿಯುತ್ತಾನೆ. ಆಗಲೇ ಆತನಿಗೆ ಹಲವಾರು ತೊಂದರೆಗಳು ಎದುರಾಗುತ್ತವೆ. ರಾಜನ್ ಹೋರಾಟವೇ ಮುಂದಿನ ಕಥೆ.

ಕನ್ನಡದಲ್ಲಿ ರೈತ ಹೋರಾಟದ ಹಾದಿಯ ಹಲವಾರು ಸಿನಿಮಾಗಳು ಬಂದಿವೆ. ‘ಧೀರ ಭಗತ್ ರಾಯ್’ ಆ ಸಾಲಿನಲ್ಲಿ ನಿಲ್ಲುತ್ತದೆ. ಇಡೀ ಹೋರಾಟದ ಕಥೆಯನ್ನು ಕರ್ಣನ್ ಪಕ್ಕಾ ಕಮರ್ಷಿಯಲ್ ಆಗಿ ನಿರೂಪಿಸಿದ್ದಾರೆ. ನವಿರಾದ ಪ್ರೀತಿ, ತಂದೆಯ ಬಾಂಧವ್ಯ, ಕೆಚ್ಚೆದೆ, ಆ್ಯಕ್ಷನ್ ಅಬ್ಬರಗಳನ್ನು ಇಲ್ಲಿ ಕಾಣಬಹುದು. ಮೊದಲರ್ಧ ಚಳವಳಿಯ ಇತಿಹಾಸದ ಪರಿಚಯದಲ್ಲಿಯೇ ಮುಗಿಯುತ್ತದೆ. ಆಗ ಸ್ವಲ್ಪ ನಿಧಾನ ಎನಿಸಬಹುದು. ಆದರೆ, ದ್ವಿತೀಯಾರ್ಧದಲ್ಲಿಯೇ ‘ಧೀರ ಭಗತ್ ರಾಯ್’ನ ನೈಜ ಹೋರಾಟ ಆರಂಭವಾಗುತ್ತದೆ. ಸಾಕಷ್ಟು ಅಧ್ಯಯನ ನಡೆಸಿ ಒಂದು ಪರಂಪರೆಯ ಚಳವಳಿ ಹಾಗೂ ನೆಲ ಮೂಲದ ಕಥೆ ಹೇಳುವಲ್ಲಿ ಕರ್ಣನ್ ಯಶಸ್ವಿಯಾಗಿದ್ದಾರೆ.

ನಾಯಕ ನಟ ರಾಕೇಶ್ ದಳವಾಯಿ ಕಣ್ಣಲ್ಲಿಯೇ ತಮ್ಮ ಆಕ್ರೋಶ ಜ್ವಾಲೆಯನ್ನು ವ್ಯಕ್ತಪಡಿಸುತ್ತಾರೆ. ನಟನೆಯಲ್ಲಿ ಭರವಸೆ ಮೂಡಿಸುತ್ತಾರೆ. ಮೊದಲರ್ಧ ಮಂಕಾಗಿದ್ದರೂ ಕಥೆ ಸಾಗಿದಂತೆ ಪಾತ್ರವನ್ನು ಜೀವಿಸಿದ್ದಾರೆ. ಸುಚರಿತಾ ಮೊದಲ ಪ್ರಯತ್ನದಲ್ಲಿ ಗೆದ್ದಿದ್ದಾರೆ. ಶರತ್ ಲೋಹಿತಾಶ್ವ, ಎಂ.ಕೆ.ಮಠ, ನೀನಾಸಂ ಅಶ್ವತ್ಥ್ ಪಾತ್ರಗಳು ಗಮನಸೆಳೆಯುತ್ತವೆ. ಈ ಚಿತ್ರದ ಹೈಲೈಟ್ ಎಂದರೆ ಕರ್ಣನ್ ಸಂಭಾಷಣೆ ಹಾಗೂ ಅದಕ್ಕೆ ತಕ್ಕ ಥ್ರಿಲ್ಲರ್ ಮಂಜು ಆ್ಯಕ್ಷನ್. ಚಿತ್ರದ ಸಂಭಾಷಣೆ ಗಟ್ಟಿಯಾಗಿದ್ದು ಕಾನೂನು, ಸಂವಿಧಾನ ಹಾಗೂ ರೈತರ ಬದುಕಿನ ಬಗ್ಗೆ ಅರಿವು ಮೂಡಿಸುತ್ತದೆ. ನಮ್ಮ ನೆಲದ ಹೋರಾಟದ ಕಥೆಯನ್ನು ಪಕ್ಕಾ ಕಮರ್ಷಿಯಲ್ ಎಲಿಮೆಂಟ್‌ನಲ್ಲಿ ನೋಡಬೇಕಾದರೆ ‘ಧೀರ ಭಗತ್ ರಾಯ್’ ಸೂಕ್ತ ಆಯ್ಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net