

ವಿಜಯವಾಣಿ ಸುದ್ದಿಜಾಲ ಬೆಂಗಳೂರು
"ರಾಮಾ ರಾಮಾ ರೇ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಧರ್ಮಣ್ಣ ಕಡೂರ್ "ಸಖತ್', "ಮದಗಜ', "ದಿಲ್ಖುಷ್', "ಉಪಾಧ್ಯಕ್ಷ' ಸೇರಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಹುತೇಕ ಹಾಸ್ಯನಟನಾಗಿ ಮಿಂಚಿದ್ದಾರೆ. ಕಳೆದ ವರ್ಷ "ರಾಜಯೋಗ' ಚಿತ್ರದ ಮೂಲಕ ನಾಯಕನಾದ ಅವರಿಗೆ, ಅದರ ಯಶಸ್ಸಿನ ಬಳಿಕ ಹೀರೋ ಆಗಿ ಎರಡನೇ ಚಿತ್ರ ಪ್ರಾರಂಭಿಸಿದ್ದಾರೆ. ಚಿತ್ರದ ಹೆಸರು "ಹಂಪಿ ಎಕ್ಸ್ಪ್ರೆಸ್'. ರಂಗಭೂಮಿ ಹಿನ್ನೆಲೆಯ ಪಾಟೀಲ್ ಲಿಂಗನಗೌಡ ಹರಪನಹಳ್ಳಿ ಈ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನೆರವೇರಿಸಲಾಗಿದೆ.
"ಹಂಪಿ ಎಕ್ಸ್ಪ್ರೆಸ್'ನಲ್ಲಿ ಇಬ್ಬರು ನಾಯಕರಿದ್ದು, ರಾಮ್ ನಾಡಗೌಡ ಮತ್ತು ಧರ್ಮಣ್ಣ ನಟಿಸುತ್ತಿದ್ದಾರೆ. "ನಾನಿಲ್ಲಿ ಫೋಟೋಗ್ರರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಈ ತಿಂಗಳಂತ್ಯದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಆನೆಗುಂದಿ ಮತ್ತು ಹಂಪಿಯ ನಡುವೆ ನದಿಯಲ್ಲಿ ಓಡಾಡುವ ಲಾಂಚ್ಗೆ ಹಂಪಿ ಎಕ್ಸ್ಪ್ರೆಸ್ ಎನ್ನುತ್ತಾರೆ. ಅಲ್ಲಿಯೇ ನಡೆದ ನೈಜ ಟನೆಯಾಧಾರಿತ ಚಿತ್ರವಾದ ಕಾರಣ ಆ ಟೈಟಲ್ ಸೂಕ್ತ ಅಂತನ್ನಿಸಿತು' ಎಂದು ಮಾಹಿತಿ ನೀಡುತ್ತಾರೆ ಧರ್ಮಣ್ಣ ಕಡೂರ್. "ರಾಜಯೋಗ' ಚಿತ್ರದ ಬಳಿಕ ಅವರಿಗೆ ನಾಯಕನಾಗಿ ಹಲವು ಅವಕಾಶಗಳು ಬಂದಿವೆಯಂತೆ. "ಆದರೆ, ಮಾಸ್, ಲವ್, ಫೈಟ್ ಸಬ್ಜೆಕ್ಟ್ಗಳು ನನಗೆ ಹೊಂದುವುದಿಲ್ಲ. ನೈಜತೆಗೆ ಹತ್ತಿರುವಿದ್ದರೆ ಚಂದ. ಅನಂತ್ ನಾಗ್, ಶಶಿಕುಮಾರ್, ಕಾಶೀನಾಥ್ ಅವರು ನಟಿಸುತ್ತಿದ್ದ ಕೌಟುಂಬಿಕ ಕಥೆಗಳು ನನಗೆ ಹೆಚ್ಚು ಸೂಟ್ ಆಗುತ್ತವೆ. ಕೆಲ ತಿಂಗಳಿಂದ ಎಂಟು, ಒಂಭತ್ತು ಕಥೆಗಳನ್ನು ಕೇಳಿದ್ದೇನೆ. ಅವುಗಳಲ್ಲಿ ಎರಡು ಕಥೆ ಓಕೆ ಆಗಿದೆ. ಅದರಲ್ಲಿ ಒಂದು ಇದೀಗ ಸೆಟ್ಟೇರಿದೆ' ಎಂದು ಹೇಳಿಕೊಳ್ಳುತ್ತಾರೆ ಧರ್ಮಣ್ಣ ಕಡೂರ್.
ಸದ್ಯ ಅವರು "ವಿದ್ಯಾಪತಿ', "ಜಾಗಟೆ ಜೆನ್ಸೆಟ್ಸ್', ಗುರುನಂದನ್ ಹೊಸ ಪ್ರಾಜೆಕ್ಟ್, "ಎಕ್ಸ್ ಆ್ಯಂಡ್ ವೈ' ಸೇರಿ ಕೆಲ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.