NITE ROAD Review: ಅಮಾವಾಸ್ಯೆಯ ಕರಾಳತೆಗೆ ವಿಜ್ಞಾನ ಮತ್ತು ಆಧ್ಯಾತ್ಮಗಳ ಉತ್ತರ

zxccasdc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಚಿತ್ರ: ನೈಟ್​ ರೋಡ್​
ನಿರ್ದೇಶನ ಮತ್ತು ನಿರ್ಮಾಣ: ಗೋಪಾಲ್​ ಹಳೇಪಾಳ್ಯ
ತಾರಾಗಣ: ಧರ್ಮ, ಜ್ಯೋತಿ ರೈ, ಗೋವಿಂದೇಗೌಡ, ಗಿರಿಜಾ ಲೋಕೇಶ್​, ರೇಣು ಶಿಕಾರಿ, ರಂಗಾಯಣ ಮಂಜು, ಆರ್ಯನ್​ ಶೆಟ್ಟಿ, ರವಿ ಕಿಶೋರ್​ ಮುಂತಾದವರು

ಪಾಪಕ್ಕೆ ಪ್ರಾಯಶ್ಚಿತವಿದೆಯೇ? ಆಯಾ ಜನ್ಮದಲ್ಲಿ ಮಾಡಿದ ಕುಕರ್ಮಗಳಿಗೆ, ಆ ಜನ್ಮದಲ್ಲಿಯೇ ಶಿಕ್ಷೆ ಸಿಗುತ್ತದೆಯೇ? ಪ್ರಪಂಚದಲ್ಲಿ ನಮ್ಮಂತೆಯೇ ಏಳು ಜನ ಇರುತ್ತಾರಂತೆ. ಅಂಥವರು ನಮ್ಮ ಸುತ್ತಮುತ್ತಲೇ ಇದ್ದರೆ? ಹೀಗೆ ನಮ್ಮಂತೆ ಕಾಣುವವರಿಗೂ, ನಮಗೂ ಏನಾದರೂ ಲಿಂಕ್​ ಇರುತ್ತಾ? ಇಂತಹ ಹಲವು ಪ್ರಶ್ನೆಗಳಿಗೆ ಸಸ್ಪೆನ್ಸ್​ ಥ್ರಿಲ್ಲರ್​ ಅಂಶಗಳೊಂದಿಗೆ ಆಧ್ಯಾತ್ಮದ ಮೂಲಕ ನೈಟ್​ ರೋಡ್​ ಚಿತ್ರದಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಗೋಪಾಲ್​ ಹಳೇಪಾಳ್ಯ.

ದಕ್ಷ (ಧರ್ಮ). ಹೆಸರಿಗೆ ತಕ್ಕಂತೆಯೇ ದಕ್ಷ ಪೊಲೀಸ್​ ಅಧಿಕಾರಿ. ಆದರೆ, ಆತನ ಸಹೋದರ ಕಲ್ಯಾಣ್​ ಒಬ್ಬ ಕ್ರಿಮಿನಲ್​. ಯುವತಿಯೊಬ್ಬಳ ಕಿಡ್ನ್ಯಾಪ್​ ಪ್ರಕರಣದ ಬೆನ್ನತ್ತುವ ದಕ್ಷನಿಗೆ, ತಮ್ಮ ಕಲ್ಯಾಣನೇ ಅಪಹರಣಕಾರ ಅಂತ ತಿಳಿಯುತ್ತದೆ. ಯುವತಿಯನ್ನು ರಕ್ಷಿಸಿದರೂ, ಕಲ್ಯಾಣ್​ ದಕ್ಷನಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ, ನೈಟ್​ ರೋಡಲ್ಲಿ ಹೋಗುವಾಗ ಕಲ್ಯಾಣ್​ ಅಪಘಾತಕ್ಕೀಡಾಗಿ ಸಾಯುತ್ತಾನೆ. ಅದು ಕರಾಳ ಅಮವಾಸ್ಯೆಯಲ್ಲಿ ನಡೆದ ಅಪಘಾತ. ಅಂಥ ಅಮಾವಾಸ್ಯೆಯ ದಿನವೇ ಕೆಲ ಅಪಘಾತಗಳು ನಡೆದಿರುವ ಬಗ್ಗೆ ದಕ್ಷನಿಗೆ ತಿಳಿಯುತ್ತದೆ. ಆತ ಎಲ್ಲ ಕೇಸ್​ಗಳ ಬೆನ್ನು ಬೀಳುತ್ತಾನೆ. ಒಂದೊಂದೇ ವಿಷಯ ಬಯಲಾಗುತ್ತಾ ಹೋಗುತ್ತದೆ. ಅದೇನು? ಕರಾಳ ಅಮಾವಾಸ್ಯೆಗೂ ಅಪಘಾತಕ್ಕೂ ಏನು ಸಂಬಂಧ? ನೈಟ್​ ರೋಡ್​ನ ನಿಗೂಢವಾದರೂ ಏನು? ಅಂತ ತಿಳಿಯಲು ಸಿನಿಮಾ ನೋಡಿ…

ಮನಸಿನ ಮಲಿನವ ತೊಳೆದುಕೋ, ದೇಹವು ತಾನಾಗಿ ತಾನೇ ಕಂಗೊಳಿಸುತ್ತದೆ.. ಎನ್ನುವ ಅವಧೂತ ವಿನೋದ್​ ಗುರೂಜಿ ಆಗಾಗ ಬಂದು ಈ ನಿಗೂಢಗಳಿಗೆ ಆಧ್ಯಾತ್ಮದ, ಪಾಪ-ಪುಣ್ಯಗಳ ಬಗ್ಗೆ ಹೇಳುತ್ತಾ, ಕಥೆಗೆ ಮತ್ತೊಂದು ದಿಕ್ಕನ್ನೇ ನೀಡುತ್ತಾರೆ. ನಿರ್ದೇಶಕ ಗೋಪಾಲ್​ ಹಳೇಪಾಳ್ಯ ಒಂದೊಳ್ಳೆ ಸಸ್ಪೆನ್ಸ್​ ಮಿಸ್ಟರಿ ಥ್ರಿಲ್ಲರ್​ ಹೇಳುವ ಪ್ರಯತ್ನ ಮಾಡಿದ್ದಾರೆ. ಒಂಚೂರು ಆಚೀಚೆಯಾದರೂ ಪ್ರೇಕ್ಷಕರು ಇಂಟರೆಸ್ಟ್​ ಕಳೆದುಕೊಂಡುಬಿಡಬಹುದು ಎಂಬ ಅರಿವಿನಲ್ಲಿಯೇ, ಎಲ್ಲಿಯೂ ವಿನಾಕಾರಣ ಹಾಡು, ಫೈಟ್​ ಅಥವಾ ಹಾಸ್ಯದ ಸನ್ನಿವೇಶಗಳನ್ನು ತುರುಕುವ ಸಾಹಸಕ್ಕೆ ಕೈಹಾಕಿಲ್ಲ. ನೇರ ನಿರೂಪಣೆ 122 ನಿಮಿಷಗಳ ನೈಟ್​ ರೋಡ್​ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ಆದರೂ ಕೆಲವೆಡೆ ಕತ್ತರಿ ಬಳಸುವ ಅವಕಾಶವಿತ್ತು ಅಂತನ್ನಿಸದೇ ಇರದು. ಪ್ರಕರಣ ಸಾಗಿದಂತೆ ಹೊಸ ಹೊಸ ಅಂಶಗಳು ಅನಾವರಣವಾಗುತ್ತಾ ಹೋಗುತ್ತವೆ. ಧರ್ಮ ಇನ್ಸ್​ಪೆಕ್ಟರ್​ ದಕ್ಷ ಪಾತ್ರವನ್ನು ಜೀವಿಸಿದ್ದಾರೆ. ಗೋವಿಂದೇಗೌಡ ಮತ್ತು ರಂಗಾಯಣ ಮಂಜು ನಗಿಸಲು ಯತ್ನಿಸಿದ್ದಾರೆ. ಉಳಿದಂತೆ ಜ್ಯೋತಿ ರೈ, ಗಿರಿಜಾ ಲೋಕೇಶ್​, ರೇಣು, ಆರ್ಯನ್​, ರವಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಸ್ಪೆನ್ಸ್​, ಮಿಸ್ಟರಿ, ಥ್ರಿಲ್ಲರ್​ ಅಂಶಗಳನ್ನು ಇಷ್ಟಪಡುವವರು ಒಮ್ಮೆ ನೈಟ್​ ರೋಡ್​ನಲ್ಲಿ ಜರ್ನಿ ಮಾಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net