

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಬಿಗ್ಬಾಸ್ ಕನ್ನಡ ಸೀಸನ್ 11 ಮುಗಿದ ಬೆನ್ನಲ್ಲೇ ನಟ ಧರ್ಮ ಕೀರ್ತಿರಾಜ್ ತಲ್ವಾರ್ ಹಿಡಿದಿದ್ದಾರೆ. ಹೌದು, ಅವರು ನಟಿಸಿರುವ ತಲ್ವಾರ್ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ಮುಮ್ತಾಜ್ ಚಿತ್ರದ ನಿರ್ದೇಶಕ ಮುರಳಿ ಆ್ಯಕ್ಷನ್-ಕಟ್ ಹೇಳಿದ್ದು ಇತ್ತೀಚೆಗಷ್ಟೆ ಟ್ರೇಲರ್ ಮತ್ತು ಮದರ್ ಸೆಂಟಿಮೆಂಟ್ ಸಾಂಗ್ ರಿಲೀಸ್ ಮಾಡಲಾಯಿತು. ಈ ಬಾರಿಯ ಬಿಗ್ಬಾಸ್ ಸೀಸನ್ನಲ್ಲಿ ಸ್ಪರ್ಧಿಗಳಾಗಿದ್ದ ಐಶ್ವರ್ಯಾ ಸಿಂಧೋಗಿ, ಅನುಷಾ ರೈ, ಶಿಶಿರ್ ಶಾಸ್ತ್ರಿ, ಅವಿನಾಶ್ ಆಗಮಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಚಿತ್ರದಲ್ಲಿ ಕೆಲಸ ಮಾಡಿರುವ ತಂತ್ರಜ್ಱರ ಅಮ್ಮಂದಿರೇ ಚಿತ್ರದ ಮದರ್ ಸೆಂಟಿಮೆಂಟ್ ಸಾಂಗ್ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಮುರಳಿ, ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಮುಮ್ತಾಜ್ ಚಿತ್ರದಲ್ಲಿ ಧರ್ಮ ಅವರಿಂದ ಕಣ್ಣೀರು ಹಾಕಿಸಿದ್ದೆ. ಹೀಗಾಗಿಯೇ ಈ ಚಿತ್ರದಲ್ಲಿ ಅವರ ಕೈಯಲ್ಲಿ ಲಾಂಗ್ ಕೊಟ್ಟಿದ್ದೇನೆ. ಇದು ಬರೀ ರೌಡಿಸಂ ಕಥೆ ಮಾತ್ರವಲ್ಲ, ಸಂಬಂಧಗಳ ಸುತ್ತ ನಡೆಯುವ ಕಥೆ. ನಾನು ಹಾಸ್ಟೆಲ್ನಲ್ಲಿದ್ದಾಗ ನಡೆದಿದ್ದ ನೈಜ ಘಟನೆಯಿಟ್ಟುಕೊಂಡು ಈ ಕಥೆ ಮಾಡಿಕೊಂಡಿದ್ದೇನೆ, ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು. ನಾಯಕ ಧರ್ಮ ಕೀರ್ತಿರಾಜ್, ಇದೊಂದು ಆ್ಯಕ್ಷನ್, ಮದರ್ ಸೆಂಟಿಮೆಂಟ್ ಕಥೆಯ ಸಿನಿಮಾ. ದುಡ್ಡಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರೋ ಹುಡುಗನ ಪಾತ್ರದಲ್ಲಿ ನಟಿಸಿದ್ದೇನೆ. ಈ ಚಿತ್ರದಲ್ಲಿ ಉದ್ದ ಕೂದಲು ಬಿಟ್ಟು ಹೊಸ ಲುಕ್ನಲ್ಲಿ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದೇನೆ, ಎಂದರು. ನಾಯಕಿ ಅದಿತಿ ಎರಡು ಶೇಡ್ಗಳಲ್ಲಿ ನಟಿಸಿದ ಅನುಭವ ಹಂಚಿಕೊಂಡರು.
ಧರ್ಮ, ಅದಿತಿ ಜತೆ ತಲ್ವಾರ್ನಲ್ಲಿ ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ, ಮಜಾಭಾರತ ಅವಿನಾಶ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಪ್ರವೀಣ್ ಕೆಬಿ ಸಂಗೀತವಿರಲಿದ್ದು, ಸಿನಿಮಾ ಇದೇ ಫೆ.7ರ ಶುಕ್ರವಾರ ರಾಜ್ಯಾದ್ಯಂತ ತೆರೆಗೆ ಬರಲಿದೆ.