

ಕರೊನಾ ಅಂದಾಕ್ಷಣ ಕೊವಿಡ್ ವೈರಸ್, ಲಾಕ್ಡೌನ್ ಪ್ರಾಬ್ಲಮ್ಸ್ ನೆನಪಿಗೆ ಬರುತ್ತವೆ. ಮೂರು ವರ್ಷಗಳ ಕಾಲ ಅವುಗಳ ಮಧ್ಯೆ ನಲುಗಿದವರೇ ಹೆಚ್ಚು. ಆ ಸಮಸ್ಯೆಯ ನಡುವೆಯೂ ಹಲವು ಅಪರಾಧ ಚಟುವಟಿಕೆಗಳೂ ನಡೆದು ಹೋಗಿವೆ. ಕರೊನಾ ಲಾಕ್ಡೌನ್ಅನ್ನೇ ಕ್ರೈಮ್ ಎಸಗಲು ಬಳಸಿಕೊಂಡಿರುವ ಹಲವು ಉದಾಹರಣೆಗಳೂ ಇವೆ. "ಟೆನೆಂಟ್' ಚಿತ್ರ ಕರೊನಾ ಸಮಯದಲ್ಲಿ ನಡೆಯುವ ಅಂಥದ್ದೇ ಒಂದು ಕ್ರೈಮ್ ಸುತ್ತ ಸಾಗುವ ಕಥೆ. ನಿರ್ದೇಶಕ ಶ್ರೀಧರ್ ಶಾಸ್ತ್ರಿ ಚೊಚ್ಚಲ ಪ್ರಯತ್ನದಲ್ಲಿಯೇ ಒಂದು ಗ್ರಿಪ್ಪಿಂಗ್ ಕ್ರೈಮ್ ಥ್ರಿಲ್ಲರ್ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ. ಸರಳ ಕಥೆಯಲ್ಲಿ ಟ್ವಿಸ್ಟ್ಗಳ ಮೂಲಕ ಪ್ರೇಕ್ಷಕರನ್ನು ಸೀಟಂಚಿನಲ್ಲಿ ಕೂರಿಸುವ ಪ್ರಯತ್ನದಲ್ಲಿ ಯಶಸ್ಸು ಕೂಡ ಗಳಿಸಿದ್ದಾರೆ.
"ಟೆನಂಟ್' ಹೆಸರಿಗೆ ತಕ್ಕಂತೆ ಒಬ್ಬ ಬಾಡಿಗೆದಾರನ ಕುರಿತ ಕಥೆ. ಕಮಲೇಶ್ (ರಾಕೇಶ್ ಮಯ್ಯ) ಮತ್ತು ದಾಮಿನಿ (ಸೋನು ಗೌಡ) ದಂಪತಿ. ನಮ್ಮ ಸಂಸಾರ ಆನಂದ ಸಾಗರ ಎಂದು ಹಾಡಿ ಕುಣಿಯುವ ಹೊತ್ತಿಗೆ ಅವರ ಜೀವನಕ್ಕೆ ಅವರ ಮನೆಯ ಬಾಡಿಗೆದಾರ ಸುಂದರೇಶ್ (ಧರ್ಮ ಕೀರ್ತಿರಾಜ್) ಮುಳ್ಳಾಗುತ್ತಾನೆ. ಅದು ಹೇಗೆ? ಯಾಕೆ? ಎಂಬುದನ್ನು ಸಿನಿಮಾದಲ್ಲಿ ನೋಡಿದರೆ ಚಂದ. ಈ ಮೂವರ ನಡುವೆ ನಡೆಯುವ ಕ್ರೈಮ್ ಒಂದನ್ನು ಭೇದಿಸಲು ಬರುವ ಪೊಲೀಸ್ ಅಧಿಕಾರಿ ತಿಲಕ್, ನಿಜವಾದ ಅಪರಾಧಿಯನ್ನು ಕಂಡು ಹಿಡಿಯುತ್ತಾನಾ ಎಂಬುದರ ಸುತ್ತ "ಟೆನಂಟ್' ಕಥೆ ಸಾಗುತ್ತದೆ. ಕೆಲವೇ ಪಾತ್ರಗಳು, ಒಂದು ಮನೆಯಲ್ಲೇ ಬಹುತೇಕ ಶೂಟಿಂಗ್, ಎರಡು ಹಾಡುಗಳು, 99 ನಿಮಿಷಗಳ ಸಿನಿಮಾ... ಹೀಗೆ ನಿರ್ದೇಶಕ ಶ್ರೀಧರ್ ಶಾಸ್ತ್ರಿ ಎಲ್ಲೂ ಎಳೆದಾಡಲು ಹೋಗದೇ, ಸರಳವಾಗಿ ಕಥೆ ಪ್ರಾರಂಭಿಸಿ, ನಿಧಾನವಾಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ. ಹಾಗೇ ನಟ ಧರ್ಮ ಕೀರ್ತಿರಾಜ್ ಬಿಗ್ಬಾಸ್ ಮನೆಯಲ್ಲಿದ್ದಾಗಲೇ ಸಿನಿಮಾ ಬಿಡುಗಡೆಯಾಗಿದ್ದು, ಅವರಿಗೆ ಈ ಚಿತ್ರ ಹೊಸ ಇಮೇಜ್ ನೀಡಿದರೂ ಆಶ್ಚರ್ಯವಿಲ್ಲ. ಇನ್ನು ನಟಿ ಸೋನು ಗೌಡ ಕೂಡ ವಿಭಿನ್ನ ಸವಾಲಿನ ಪಾತ್ರದಲ್ಲಿ ಮಿಂಚಿದ್ದಾರೆ. ಉತ್ತಮ ಥ್ರಿಲ್ಲಿಂಗ್ ಅನುಭವ ನೀಡುವ "ಟೆನಂಟ್' ಚಿತ್ರವನ್ನು ಒಮ್ಮೆ ನೋಡಲಡ್ಡಿಯಿಲ್ಲ.