ವಾಮನನ ಮದರ್​ ಸೆಂಟಿಮೆಂಟ್​; ಧನ್ವೀರ್​, ರೀಷ್ಮಾ ನಾಣಯ್ಯ ನಟಿಸಿರುವ ಚಿತ್ರ ಏ. 10ಕ್ಕೆ ರಿಲೀಸ್​

zsc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

"ಬಜಾರ್​', "ಬೈಟೂ ಲವ್​', "ಕೈವ' ಬಳಿಕ ಧನ್ವೀರ್​ ನಟಿಸಿರುವ ನಾಲ್ಕನೇ ಸಿನಿಮಾ "ವಾಮನ'. ಇಲ್ಲಿ ಅವರಿಗೆ "ಏಕ್​ಲವ್​ಯಾ', "ಯುಐ' ಖ್ಯಾತಿಯ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ. "ವಾಮನ'ನಿಗೆ ಶಂಕರ್​ ರಾಮನ್​ ಆ್ಯಕ್ಷನ್​-ಕಟ್​ ಹೇಳಿದ್ದು, ಇತ್ತೀಚೆಗಷ್ಟೆ ಚಿತ್ರದ ನಾಲ್ಕನೇ ಸಾಂಗ್​ ರಿಲೀಸ್​ ಮಾಡಲಾಗಿದೆ. ನಟ ದರ್ಶನ್​ ಮತ್ತು ಅವರ ಪತ್ನಿ ವಿಜಯಲಕ್ಷ್ಮೀ ಈ ಹಾಡನ್ನು ರಿಲೀಸ್​ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಪ್ರಮೋದ್​ ಮರವಂತೆ ಬರೆದಿರುವ ತಾಯಿ-ಮಗನ ಬಾಂಧವ್ಯದ ಕುರಿತ ಈ ಹಾಡಿಗೆ ಅಜನೀಷ್​ ಲೋಕನಾಥ್​ ಸಂಗೀತದಲ್ಲಿ ವೆಂಕಟೇಶ್​ ಡಿ.ಸಿ. ಧ್ವನಿಯಾಗಿದ್ದಾರೆ. ನಾಯಕ ಧನ್ವೀರ್​, "ಇದು ನನ್ನ ನಾಲ್ಕನೇ ಸಿನಿಮಾ. ಅಮ್ಮ-ಮಗನ ಬಾಂಧವ್ಯದ ಈ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆಯಿದೆ' ಎಂದರು. ನಿರ್ದೇಶಕ ಶಂಕರ್​ ರಾಮನ್​, "ಈ ಹಾಡನ್ನು ವಿಶ್ವದ ಎಲ್ಲ ತಾಯಂದಿರಿಗೆ ಅರ್ಪಿಸುತ್ತೇನೆ. ನನಗೆ ಮದರ್​ ಸೆಂಟಿಮೆಂಟ್​ ಇರುವ "ಕೈ ತುತ್ತು ಕೊಟ್ಟವಳೆ ಐ ಲವ್​ ಯೂ ಮದರ್​ ಇಂಡಿಯಾ', "ಬೇಡುವೆನು ವರವನು ಕೊಡೆ ತಾಯಿ ಜನ್ಮವನು' ಹಾಡುಗಳು ತುಂಬ ಇಷ್ಟ. ಅದೇ ರೀತಿಯ ಹಾಡು ನಮ್ಮ "ವಾಮನ' ಚಿತ್ರಕ್ಕೂ ಬೇಕು ಅಂತ ಪ್ರಮೋದ್​ ಮರವಂತೆ ಅವರನ್ನು ಕೇಳಿದ್ದೆ. ಅವರು ಈ ಸುಂದರ ಹಾಡನ್ನು ಬರೆದುಕೊಟ್ಟರು' ಎಂದು ಹೇಳಿಕೊಂಡರು.

ಧನ್ವೀರ್​, ರೀಷ್ಮಾ ಜತೆ ಪೆಟ್ರೋಲ್​ ಪ್ರಸನ್ನ, ಶಿವರಾಜ್​ ಕೆ.ಆರ್​.ಪೇಟೆ, ಕಾಕ್ರೋಚ್​ ಸುಧೀ ಪ್ರಮುಖ ತಾರಾಗಣದಲ್ಲಿ ನಟಿಸಿರುವ "ವಾಮನ' ಇದೇ ಏ.10ರಂದು ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net