ಬಾಲಿವುಡ್​ ಚಿತ್ರದ ಹಾಡಿಗೆ ಧ್ವನಿಯಾದ ತಮಿಳು ನಟ ಧನುಷ್​

Dhanush
Published on

ಮುಂಬೈ: ಕಾಲಿವುಡ್ ನಟ ಧನುಷ್​, ನಟನೆ, ನಿರ್ಮಾಣ, ನಿರ್ದೇಶನ, ಹಾಡುಗಾರಿಕೆ ಎಲ್ಲದರಲ್ಲೂ ಗುರುತಿಸಿಕೊಂಡಿದ್ದಾರೆ. ಇದೀಗ ವಿಶೇಷ ಎಂಬಂತೆ ಬಾಲಿವುಡ್​ ಚಿತ್ರವೊಂದರ ಹಾಡಿಗೆ ಧ್ವನಿಯಾಗಿದ್ದಾರೆ. ಹೌದು, ‘ಜೀರೋ’ ಸಿನಿಮಾ ಬಳಿಕ ಆನಂದ್​ ಎಲ್ ​ರಾಯ್​ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಅತರಂಗಿ ರೇ ಚಿತ್ರದ ಹಾಡೊಂದಕ್ಕೆ ಧನುಷ್ ಧ್ವನಿ ನೀಡಿದ್ದಾರೆ. ಅಚ್ಚರಿ ಏನೆಂದರೆ, ಈ ಚಿತ್ರದಲ್ಲಿ ಧನುಷ್​​ ಸಹ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದಾರೆ.

ಅಕ್ಷಯ್​ ಕುಮಾರ್​, ಸಾರಾ ಅಲಿ ಖಾನ್​ ಜತೆಗೆ ಧನುಷ್​ ಸಹ ಈ ಸಿನಿಮಾದಲ್ಲಿರಲಿದ್ದು, ಈಗಾಗಲೇ ಪ್ರೀ ಪ್ರೊಡಕ್ಷನ್​ ಕೆಲಸಗಳು ಶುರುವಾಗಿವೆ. ಅದೇ ರೀತಿ ಹಾಡಿನ ಕೆಲಸಗಳೂ ಆರಂಭವಾಗಿದ್ದು, ಎ.ಆರ್ ರೆಹಮಾನ್​ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್​ನಲ್ಲಿ ಧನುಷ್​ ಭಾಗವಹಿಸಿ ಬಂದಿದ್ದಾರೆ. ಅಷ್ಟೇ ಅಲ್ಲ, ರೆಹಮಾನ್​ ಜತೆಗಿನ ಒಂದು ಸೆಲ್ಫಿಯನ್ನು ಸೋಷಿಯಲ್​ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿರಬೇಕಿತ್ತು. ಆದರೆ, ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಶೂಟಿಂಗ್​ ಕೆಲಸಗಳೇ ಶುರುವಾಗಲಿಲ್ಲ. ಇದೀಗ ಮುಂದಿನ ವರ್ಷದ ಮಾರ್ಚ್​ ವೇಳೆಗೆ ಈ ಸಿನಿಮಾ ಶುರುವಾಗಲಿದೆಯಂತೆ. ಈ ಮೊದಲು ಅಮಿತಾಬ್​ ಜತೆ ಶಮಿತಾಬ್​ ಚಿತ್ರದಲ್ಲಿ ಧನುಷ್​ ನಟಿಸಿದ್ದರು. ಇದೀಗ ಅತರಂಗಿರೇ ಚಿತ್ರದ ಮೂಲಕ ಎರಡನೇ ಬಾರಿ ಬಾಲಿವುಡ್​ನತ್ತ ಮುಖ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net