

‘ಡಾಲಿ’ ಧನಂಜಯ್ ಎಲ್ಲ ರೀತಿಯ ಪಾತ್ರಗಳಿಗೆ ಸಲ್ಲುವ ನಟ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಅವರ ಈ ಹಿಂದಿನ ಸಿನಿಮಾಗಳು, ಸದ್ಯ ಒಪ್ಪಿಕೊಂಡಿರುವ ಚಿತ್ರಗಳಲ್ಲಿ ಅವೆಲ್ಲವೂ ಇಣುಕಿ ಹಾಕಿವೆ, ಹಾಕುತ್ತಿವೆ. ಇದೀಗ ಅಂಥದ್ದೇ ವಿಶೇಷ ಶೀರ್ಷಿಕೆಯ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಅದರ ಹೆಸರು, ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’.
ಈ ಹಿಂದೆ, ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಅನ್ನೋ ಸಿನಿಮಾ ತೆರೆಗೆ ಬಂದಿತ್ತು. ಆ ಚಿತ್ರದ ನಿರ್ದೇಶಕ ಕುಶಾಲ್ ಗೌಡ ಅವರ ಎರಡನೇ ಸಿನಿಮಾ ಇದು. ‘ನನಗೆ ನೀವೇ ಬೇಕು, ನಿಮಗಾಗಿ ಎಷ್ಟು ವರ್ಷವಾದರೂ ಕಾಯುತ್ತೇನೆ ...’ ಎಂದು ಕಷ್ಟಪಟ್ಟು ಧನಂಜಯ ಅವರ ಕಾಲ್ಶೀಟ್ ಪಡೆದು, ಈಗಾಗಲೇ 30 ದಿನಗಳ ಶೂಟಿಂಗ್ ಸಹ ಮುಗಿಸಿದ್ದಾರೆ. ಫಸ್ಟ್ಲುಕ್ನಲ್ಲಿಯೇ ಹಸಿರ ರಾಶಿಯನ್ನು ಹೊದಿಸಿ, ಪುಟಾಣಿ ಜತೆಗೆ ಕುಳಿತ ಕಥಾನಾಯಕನನ್ನು ನಿರ್ದೇಶಕರು ತೋರಿಸಿದ್ದಾರೆ.
‘ಇದೊಂದು 1980ರ ಕಾಲಘಟ್ಟದಲ್ಲಿ ನಡೆಯುವ ಕಥೆ’ ಎಂದಷ್ಟೇ ಸುಳಿವು ನೀಡುತ್ತಾವರು. ಮುಂದುವರಿದು ಮಾಹಿತಿ ನೀಡುವ ಧನಂಜಯ, ‘ನಿರ್ದೇಶಕರು ಓದಿಕೊಂಡಿದ್ದಾರೆ. ಬರವಣಿಗೆ ಬಗ್ಗೆ ಮಾತನಾಡುವಂತಿಲ್ಲ. ಸಿನಿಮಾ ಮೇಲಿನ ಅವರ ಪ್ಯಾಶನ್ ಸಹ ಈ ಚಿತ್ರವನ್ನು ಒಪ್ಪಿಕೊಳ್ಳುವಂತೆ ಮಾಡಿದೆ. ಅಷ್ಟೇ ನೀಟಾಗಿ ಸಿನಿಮಾ ಸಾಗುತ್ತಿದೆ. ಇದೊಂದು ಫೀಲ್ ಗುಡ್ ಸಿನಿಮಾ. ಪ್ರಯಾಣದ ಹಾದಿಯಲ್ಲಿ ಸಾಗುವ ಚಿತ್ರ. ನನ್ನ ಪಾತ್ರವೂ ಅಷ್ಟೇ ಚೆನ್ನಾಗಿ ಡಿಸೈನ್ ಮಾಡಿದ್ದಾರೆ’ ಎಂಬುದು ಅವರ ಮಾತು. ಇನ್ನು ನಾಯಕಿ ಅದಿತಿ ಪ್ರಭುದೇವ ಖುಷಿಗೆ ಪಾರವೇ ಇರಲಿಲ್ಲ.
‘ಕೆಲವು ಸಿನಿಮಾ ದುಡ್ಡಿಗಾಗಿ ಮಾಡ್ತೀವಿ, ಇನ್ನು ಕೆಲವನ್ನು ಆತ್ಮತೃಪ್ತಿಗಾಗಿ ಮಾಡ್ತೀವಿ, ಸ್ಟಾರ್ ಕಾಸ್ಟ್ ನೋಡಿ, ಬ್ಯಾನರ್ ನೋಡಿ, ನಿರ್ದೇಶಕರನ್ನು ನೋಡಿಯೂ ಸಿನಿಮಾ ಮಾಡಿದ್ದಿದೆ. ಇದೀಗ ಆ ಎಲ್ಲವೂ ಇದೊಂದೇ ಸಿನಿಮಾದಲ್ಲಿ ಸಿಗುತ್ತಿದೆ. ಈಗಾಗಲೇ ಧನಂಜಯ್ ಜತೆಗೆ ‘ತೋತಾಪುರಿ’ಯಲ್ಲಿ ನಟಿಸಿದ್ದೇನೆ. ಇದೀಗ ಮತ್ತೊಂದು ಸಲ’ ಎನ್ನುತ್ತಾರೆ. ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಭಾವನಾ, ಯಶ್ ಶೆಟ್ಟಿ, ತ್ರಿವೇಣಿ, ಸತ್ಯ, ನಂದಕಿಶೋರ್, ಪ್ರಾಣ್ಯ ಹೀಗೆ ಕಲಾವಿದರ ಪಟ್ಟಿ ಬೆಳೆಯುತ್ತದೆ. ಚಿಕ್ಕಮಗಳೂರು, ಕುದುರೆಮುಖದಲ್ಲಿ 30 ದಿನಗಳ ಶೂಟಿಂಗ್ ಮುಗಿದಿದೆ. ಮಾಸ್ತಿ ಸಂಭಾಷಣೆ, ಕಾರ್ತಿಕ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಶ್ರೀಹರಿ ನಿರ್ದೇಶಕರ ಸಿನಿಮಾ ಕನಸಿಗೆ ಬಂಡವಾಳ ಹೂಡುತ್ತಿದ್ದಾರೆ.