‘ಪುಷ್ಪ’ ಚಿತ್ರದಲ್ಲಿ ನಟಿಸಲು ಧನಂಜಯ್‌ಗೆ ಆಫರ್: ಈ ಬಗ್ಗೆ ಡಾಲಿ ಹೇಳಿದ್ದೇನು?

Dhananjay Final
Published on

ಲಾಕ್‌ಡೌನ್‌ನಿಂದಾಗಿ ಧನಂಜಯ್ ಅಭಿನಯದ ಚಿತ್ರಗಳೆಲ್ಲಾ ಲಾಕ್ ಆಗಿವೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟರಲ್ಲಿ ‘ಸಲಗ’ ಬಿಡುಗಡೆಯಾಗಿರಬೇಕಿತ್ತು. ‘ಯುವರತ್ನ’ ಬಿಡುಗಡೆಗೆ ಸಿದ್ಧವಾಗಬೇಕಿತ್ತು. ‘ಬಡವ ರಾಸ್ಕಲ್’ ಚಿತ್ರದ ಶೂಟಿಂಗ್ ಮುಗಿದಿರಬೇಕಿತ್ತು. ಆದರೆ, ಲಾಕ್‌ಡೌನ್‌ನಿಂದ ಇವೆಲ್ಲಾ ಸದ್ಯಕ್ಕೆ ಸ್ಟಾಪ್ ಆಗಿವೆ. ಅಷ್ಟೇ ಅಲ್ಲ, ಲಾಕ್‌ಡೌನ್ ಆಗಿರಲಿಲ್ಲ ಎಂದಿದ್ದರೆ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದಲ್ಲೂ ಧನಂಜಯ್ ನಟಿಸಬೇಕಿತ್ತು.

ಹೌದು, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದಲ್ಲಿ ಧನಂಜಯ್ ನಟಿಸಬೇಕಿತ್ತಂತೆ. ಈ ಕುರಿತು ಒಂದು ರೌಂಡ್ ಮಾತುಕತೆಯೂ ಆಗಿತ್ತಂತೆ. ಅಷ್ಟರಲ್ಲಿ ಲಾಕ್‌ಡೌನ್ ಆಗಿರುವುದರಿಂದ ಅಷ್ಟಕ್ಕೇ ನಿಂತಿದೆ. ಲಾಕ್‌ಡೌನ್ ಮುಗಿದು, ಎಲ್ಲವೂ ಅಂದುಕೊಂಡಂತೆ ಆದರೆ, ‘ಪುಷ್ಪ’ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಧನಂಜಯ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘‘ಪುಷ್ಪ’ ಚಿತ್ರತಂಡದಿಂದ ಫೋನ್ ಬಂದಿತ್ತು. ಮಾತುಕತೆ ನಡೆದಿತ್ತು. ಯಾವುದೂ ಅಂತಿಮವಾಗಿರಲಿಲ್ಲ. ಅಷ್ಟರಲ್ಲಿ ಲಾಕ್‌ಡೌನ್ ಆಗಿದ್ದರಿಂದ ಮುಂದುವರೆಯಲಿಲ್ಲ. ಈ ಮಧ್ಯೆ ಆಂಧ್ರದಲ್ಲಿ ನಾನು ಚಿತ್ರದಲ್ಲಿ ಅಭಿನಯಿಸುತ್ತಿದ್ದೀನಿ ಎಂದು ಸುದ್ದಿಯಾಗಿದೆಯಂತೆ. ಆದರೆ, ಯಾವುದೂ ಅಂತಿಮವಾಗಿಲ್ಲ. ಮಾತುಕತೆ ಮುಂದುವರೆಯಬೇಕು. ಎಲ್ಲಾ ಕೂಡಿ ಬಂದರೆ, ಆ ಚಿತ್ರದಲ್ಲಿ ನಟಿಸಬಹುದು’ ಎನ್ನುತ್ತಾರೆ ಧನಂಜಯ್.

‘ಪುಷ್ಪ’ ಚಿತ್ರದಲ್ಲಿ ನಟಿಸಿದರೆ, ಇದು ಧನಂಜಯ್ ಅಭಿನಯದ ಎರಡನೆಯ ತೆಲುಗು ಚಿತ್ರವಾಗುತ್ತದೆ. ಇದಕ್ಕೂ ಮುನ್ನ ಅವರು ರಾಮ್‌ಗೋಪಾಲ್ ವರ್ಮ ನಿರ್ಮಾಣದ ‘ಭೈರವ ಗೀತಾ’ ಚಿತ್ರದಲ್ಲಿ ನಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net