

ಬೆಂಗಳೂರು: "ಯಾವ ಗ್ಯಾಪ್ನಲ್ಲಿ ಈ ಸಿನಿಮಾ ಮಾಡಿದ್ರಿ?' ಅಂತ ಗೆಳೆಯರು ಕೇಳಿದರಂತೆ. ಈ ಪ್ರಶ್ನೆ ಬರೀ ಧನಂಜಯ್ ಗೆಳೆಯರಿಗಷ್ಟೇ ಅಲ್ಲ, ಗೆಳೆಯರಲ್ಲದವರಿಗೂ ಸಹಜವಾಗಿಯೇ ಬರಬಹುದು. ಏಕೆಂದರೆ, "21 ಅವರ್ಸ್' ಎಂಬ ಚಿತ್ರದಲ್ಲಿ ಧನಂಜಯ್ ನಟಿಸುತ್ತಿರುವುದು ಹೆಚ್ಚು ಸುದ್ದಿಯಾಗಿರಲಿಲ್ಲ. ಈಗ ಈ ಚಿತ್ರವು ಮೇ 20ಕ್ಕೆ ಬಿಡುಗಡೆಯಾಗುತ್ತಿದ್ದು, ಅದಕ್ಕೂ ಮುನ್ನ ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
"ಮೊದಲ ಲಾಕ್ಡೌನ್ ನಂತರ ಮಾಡಿರುವ ಸಿನಿಮಾ ಇದು. ಮಲಯಾಳಿ ಹುಡುಗಿಯೊಬ್ಬಳು ಬೆಂಗಳೂರಿಗೆ ಬಂದು ಕಾಣೆಯಾಗುತ್ತಾಳೆ. ಆಕೆಯ ಹುಡುಕಾಟದ ಸುತ್ತ ನಡೆಯುವ ಕಥೆ ಇದು. ನಾನು ತನಿಖಾಧಿಕಾರಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಕರ್ನಾಟಕ ಹಾಗೂ ಕೇರಳದಲ್ಲಿ ನಡೆಯುವ ಕಥೆ ಇದು. ಹಾಗಾಗಿ, ಕನ್ನಡ ಮತ್ತು ಮಲಯಾಳಂನಲ್ಲಿ ಸಂಭಾಷಣೆ ಇರುತ್ತದೆ. ಅಷ್ಟೇ ಅಲ್ಲ, ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಮೊದಲು ಇಲ್ಲಿ ಬಿಡುಗಡೆಯಾಗಿ, ನಂತರ ಕೇರಳದಲ್ಲಿ ತೆರೆ ಕಾಣುತ್ತಿದೆ. ಒಳ್ಳೆಯ ತಂಡದ ಜತೆಗೆ ಕೆಲಸ ಮಾಡಿದ ಖುಷಿ ಇದೆ. ಬಹಳ ದಿನಗಳ ನಂತರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದೇನೆ' ಎನ್ನುತ್ತಾರೆ ಧನಂಜಯ್.
ಈ ಚಿತ್ರವನ್ನು ನಿರ್ದೇಶಿಸಿರುವುದು ಜಯಶಂಕರ್ ಪಂಡಿತ್. ಮೂಲತH ಕರ್ನಾಟಕದವರಾದರೂ, ಈಗಿರುವುದು ಕೇರಳದಲ್ಲಿ. ಅಮಿತಾಭ್ ಬಚ್ಚನ್, ಐಶ್ವರ್ಯಾ ರೈ ಸೇರಿದಂತೆ ಹಲವು ಜನಪ್ರಿಯ ನಟ&ನಟಿಯರು ಅಭಿನಯಿಸಿರುವ ಜಾಹೀರಾತುಗಳನ್ನು ನಿರ್ದೇಶಿಸಿದ್ದಾರಂತೆ. ಇದೇ ಮೊದಲ ಬಾರಿಗೆ ಚಿತ್ರ ನಿರ್ದೇಶಿಸಿದ್ದಾರೆ. 21 ಗಂಟೆಗಳಲ್ಲಿ ನಡೆಯುವ ಕಥೆ ಇದು ಎನ್ನುತ್ತಾರೆ ಜಯಶಂಕರ್.
"21 ಅವರ್ಸ್'ನಲ್ಲಿ ಧನಂಜಯ್ ಜತೆಗೆ ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ಅಭಿಷೇಕ್ ರುದ್ರಮೂರ್ತಿ, ಸುನೀಲ್ ಗೌಡ ಮುಂತಾದವರು ನಿರ್ಮಿಸಿದ್ದಾರೆ.