ರೆಕಾರ್ಡ್ ಇರಲಿ ಲಿಮ್ಕಾನೂ ಸಿಗಲಿಲ್ಲ

Sadhu
Published on

ಬೆಂಗಳೂರು: ರವಿಚಂದ್ರನ್ ಅವರ ಮಗ ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್​ಪೇಟೆ’ ಚಿತ್ರವು ನ.19ಕ್ಕೆ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಸಾಧು ಕೋಕಿಲ 17 ಗೆಟಪ್​ಗಳಲ್ಲಿ ಕಾಣಿಸಿಕೊಂಡು ಹೊಸ ದಾಖಲೆ ನಿರ್ವಿುಸಿದ್ದಾರೆ ಎಂದು ಚಿತ್ರತಂಡದವರು 2 ವರ್ಷಗಳ ಹಿಂದೆ ಸುದ್ದಿ ಮಾಡಿದ್ದರು. ಲಿಮ್ಕಾ ಪುಸ್ತಕದಲ್ಲಿ ದಾಖಲಿಸುವುದಾಗಿಯೂ ಹೇಳಿದ್ದರು. ಆದರೆ, ಅಂಥದ್ದೇನೋ ಘಟನೆ ಸಂಭವಿಸಿದ ಹಾಗೆ ಕಾಣುವುದಿಲ್ಲ. ಈ ಕುರಿತು ಮಾತನಾಡುವ ಸಾಧು, ‘ಲಿಮ್ಕಾ ದಾಖಲೆ ಬಿಡಿ, ಲಿಮ್ಕಾನೂ ಸಿಗಲಿಲ್ಲ. ಚಿತ್ರತಂಡದವರನ್ನು ಕೇಳಿದರೆ, ಹೇಗೆ ಕಳಿಸೋದು ಅಂತ ನನ್ನನ್ನೇ ಕೇಳುತ್ತಾರೆ.

ಇದುವರೆಗೂ ಒಬ್ಬ ವ್ಯಕ್ತಿ ಒಂದು ಚಿತ್ರದಲ್ಲಿ 16 ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ದಾಖಲೆಯಾಗಿತ್ತಂತೆ. ನಾನು ಈ ಚಿತ್ರದಲ್ಲಿ 17 ಪಾತ್ರಗಳಲ್ಲಿ ಕಾಣಿಸಿಕೊಂಡು ಹೊಸ ದಾಖಲೆ ಮಾಡಿದ್ದೇನೆ. ನನಗೆ ಮುಖಕ್ಕೆ ಗಮ್ ಹಾಕಿದರೆ ಆಗುವುದಿಲ್ಲ. ದಾಡಿ ಅಂಟಿಸಿಕೊಳ್ಳಿ ಎಂದರೆ ಓಡಿ ಹೋಗುತ್ತೇನೆ. ಅಂಥದ್ದರಲ್ಲಿ ಈ ಚಿತ್ರದಲ್ಲಿ ಏನೇನೋ ಮಾಡಿದೆ. ಆದರೆ, ದಾಖಲೆ ಆಗಲಿಲ್ಲ. ದಯವಿಟ್ಟು ಲಿಮ್ಕಾ ದಾಖಲೆ ಪುಸ್ತಕಕ್ಕೆ ಹೋಗುವುದು ಹೇಗೆ ಎಂದು ದಾರಿ ತೋರಿಸಿ’ ಎನ್ನುತ್ತಾರೆ ಅವರು.

ಸಾಧು ಹೀಗೆ ಮಾತನಾಡಿದ್ದು ಚಿತ್ರದ ಪತ್ರಿಕಾಗೋಷ್ಠಿಯಲ್ಲಿ. ಚಿತ್ರದ ಬಗ್ಗೆ ಮಾತನಾಡಿದ ಮನು, ‘ಸಾಧು ಕೋಕಿಲ, ರಂಗಾಯಣ ರಘು, ತಾರಾ, ಅವಿನಾಶ್ ಅವರಂತಹ ಉತ್ತಮ ಕಲಾವಿದರೊಡನೆ ಅಭಿನಯಿಸಿದ ಅನುಭವ ನಿಜಕ್ಕೂ ಮರೆಯುವ ಹಾಗಿಲ್ಲ. ಚಿತ್ರದ ತುಣುಕು ಹಾಗೂ ಹಾಡುಗಳನ್ನು ಅಪ್ಪನಿಗೆ ತೋರಿಸಿದೆ. ಅವರು ಬಹಳ ಇಷ್ಟಪಟ್ಟರು’ ಎಂದರು. ‘ಮುಗಿಲ್​ಪೇಟೆ’ ಚಿತ್ರವನ್ನು ಭರತ್ ನಾವುಂದ ನಿರ್ದೇಶಿಸಿದರೆ, ರಕ್ಷಾ ಎಸ್. ವಿಜಯಕುಮಾರ್ ನಿರ್ವಿುಸಿದ್ದಾರೆ. ನಾಯಕಿಯಾಗಿ ಖಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net