

ಬೆಂಗಳೂರು: ಇತ್ತೀಚೆಗೆ ಕಂಬಳ ಮತ್ತೊಮ್ಮೆ ಜಗತ್ತಿನಾದ್ಯಂತ ಸದ್ದು ಮಾಡಿದ ಬೆನ್ನಿಗೇ ಆ ಕುರಿತ ಸಿನಿಮಾ ಸೆಟ್ಟೇರುವ ಬಗ್ಗೆ ಈಗಾಗಲೇ ಸುದ್ದಿಯಾಗಿತ್ತು. ಆದರೆ ‘ಕಂಬಳ’ ಟೈಟಲ್ನ ಈ ಸಿನಿಮಾದಲ್ಲಿ ಯಾರ್ಯಾರು ಇರಲಿದ್ದಾರೆ ಎಂಬ ಬಗ್ಗೆ ಕುತೂಹಲ ಹಾಗೇ ಉಳಿದಿತ್ತು. ಇದೀಗ ಆ ಕುರಿತು ಒಂದಷ್ಟು ಮಾಹಿತಿ ಹೊರಬಿದ್ದಿದ್ದು, ಚಿತ್ರದಲ್ಲಿ ಬಾಲಿವುಡ್ ಸ್ಟಾರ್ಸ್ ಕೂಡ ಇರಲಿದ್ದಾರಂತೆ. ಯಾರವರು ಬಾಲಿವುಡ್ ತಾರೆಯರು ಎಂಬುದಕ್ಕೆ ಸದ್ಯದ ಉತ್ತರ ಸುನೀಲ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ.
‘ಲೆಮನ್ ಗ್ರಾಸ್ ಸ್ಟುಡಿಯೋಸ್’ ಬ್ಯಾನರ್ವುೂಲಕ ಕರಾವಳಿಯ ಲೋಕೇಶ್ ಶೆಟ್ಟಿ ಅವರು ನಿರ್ಮಾಣ ಮಾಡುತ್ತಿರುವ ‘ಕಂಬಳ’ ಸಿನಿಮಾದಲ್ಲಿ ಹಿಂದಿ ಚಿತ್ರರಂಗದ ಸುನೀಲ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಾಗಾದರೆ ಚಿತ್ರದಲ್ಲಿ ಅವರ ಪಾತ್ರವೇನು ಎಂಬುದಕ್ಕೆ ಉತ್ತರ ಗೆಸ್ಟ್ ಅಪಿಯರೆನ್ಸ್. ಅಂದರೆ ಅವರು ಬರೀ ಅತಿಥಿ ಕಲಾವಿದರಾಗಿಯಷ್ಟೇ ಅಲ್ಲ, ನಿಜವಾಗಿಯೂ ಅತಿಥಿಗಳಾಗಿಯೇ ಕಾಣಿಸಿಕೊಳ್ಳಲಿರುವುದರಿಂದ ಅವರದ್ದಿಲ್ಲಿ ರಿಯಲ್ ಆಗಿಯೂ ‘ಗೆಸ್ಟ್ ಅಪಿಯರೆನ್ಸ್’. ‘ಸಿನಿಮಾದಲ್ಲಿ ಕಂಬಳ ಸ್ಪರ್ಧೆಯ ಅದ್ದೂರಿ ದೃಶ್ಯ ಇರುತ್ತದೆ. ಅದರ ಶೂಟಿಂಗ್ಗೆ
ಅತಿಥಿಯಾಗಿ ಸುನೀಲ್ ಶೆಟ್ಟಿ ಹಾಗೂ ಶಿಲ್ಪಾ ಶೆಟ್ಟಿ ಅವರನ್ನು ಆಹ್ವಾನಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅವರಿಬ್ಬರೂ ಆಗಮಿಸಿ ಕಂಬಳದ ದೃಶ್ಯವನ್ನು ವೀಕ್ಷಿಸುವ ದೃಶ್ಯ ಚಿತ್ರೀಕರಿಸಿಕೊಳ್ಳಲಿದ್ದೇವೆ. ಆ ನಿಟ್ಟಿನಲ್ಲಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಅಂದುಕೊಂಡಂತೆಯೇ ನಡೆದರೆ ಇಬ್ಬರು ಬಾಲಿವುಡ್ ಸ್ಟಾರ್ಸ್ ಕಂಬಳ ಸಿನಿಮಾದಲ್ಲಿ ಗೆಸ್ಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ’ ಎನ್ನುತ್ತಾರೆ ನಿರ್ವಪಕ ಲೋಕೇಶ್ ಶೆಟ್ಟಿ.
ಇನ್ನು ಈ ಸಿನಿಮಾ ತುಳು-ಕನ್ನಡ ಮಾತ್ರವಲ್ಲದೆ ಹಿಂದಿಯ ಪ್ರೇಕ್ಷಕರಿಗೂ ಕಂಬಳ ವೈಭವದ ದರ್ಶನ ಮಾಡಿಸಲಿದೆ. ‘ತುಳು-ಕನ್ನಡ ಎರಡೂ ಭಾಷೆಯಲ್ಲಿ ಈ ಚಿತ್ರ ಏಕಕಾಲದಲ್ಲಿ ನಿರ್ವಣವಾಗಲಿದೆ. ಆದರೆ ಎರಡರಲ್ಲೂ ಪ್ರಮುಖ ಒಂದೆರಡು ಪಾತ್ರಗಳಿಗೆ ಬೇರೆ ಬೇರೆ ಕಲಾವಿದರನ್ನು ಹಾಕಿಕೊಳ್ಳಲಾಗುವುದು. ಕನ್ನಡ-ತುಳು ಶೂಟಿಂಗ್ ಮುಗಿಯುತ್ತಿದ್ದಂತೆ ಬೇರೆ ತಾರಾಗಣದ ಮೂಲಕ ಹಿಂದಿಯಲ್ಲೂ ಕಂಬಳ ಚಿತ್ರೀಕರಿಸಿಕೊಳ್ಳುವ ಯೋಜನೆ ಇದೆ ಎನ್ನುತ್ತಾರೆ’ ನಿರ್ವಪಕರು. ಅಂದಹಾಗೆ, ತಾರಾಗಣದ ಬಗ್ಗೆ ಇನ್ನೆರಡು ದಿನಗಳಲ್ಲಿ ಚಿತ್ರತಂಡ ಅಧಿಕೃತವಾಗಿ ತಿಳಿಸಲಿದೆ.