

ಬೆಂಗಳೂರು: ಶಿವಾಜಿ ಈಗ ಸುರತ್ಕಲ್ನಿಂದ ದೇಶಾದ್ಯಂತ ಪ್ರಯಾಣ ಹೊರಟಿದ್ದಾನೆ. ಅಂದರೆ, ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ, ಕಳೆದ ಶುಕ್ರವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆ ಆಗಿದ್ದ ‘ಶಿವಾಜಿ ಸುರತ್ಕಲ್’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಫೆ.28ರಂದು ದೇಶಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ, ಈ ಶುಕ್ರವಾರ ಕರ್ನಾಟಕ ಮಾತ್ರವಲ್ಲದೆ ಚೆನ್ನೈ, ಹೈದರಾಬಾದ್, ಕೊಯಂಮತ್ತೂರು, ದೆಹಲಿ, ಪುಣೆ, ಅಹಮದಾಬಾದ್, ಮುಂಬೈನ ಚಿತ್ರಮಂದಿರಗಳಲ್ಲೂ ‘ಶಿವಾಜಿ..’ ಕಾಣಿಸಿಕೊಳ್ಳಲಿದ್ದಾನೆ.
ಮತ್ತೊಂದೆಡೆ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆಯಿಂದ ಸಿನಿಮಾದ ಪ್ರದರ್ಶನಗಳ ಸಂಖ್ಯೆಯೂ ಹೆಚ್ಚಾಗಿದೆ. ಆರಂಭದಲ್ಲಿ 80 ಪ್ರದರ್ಶನಗಳೊಂದಿಗೆ ತೆರೆ ಕಂಡಿದ್ದ ಚಿತ್ರ ಈಗ ಸುಮಾರು 134 ತೆರೆಗಳಲ್ಲಿ ಪ್ರದರ್ಶನವಾಗುತ್ತಿದೆ ಎಂಬುದಾಗಿ ನಿರ್ದೇಶಕ ಆಕಾಶ್ ಶ್ರೀವತ್ಸ ತಿಳಿಸಿದ್ದಾರೆ. ಅಲ್ಲದೆ, ವಿದೇಶಗಳಲ್ಲೂ ಕನ್ನಡಿಗರು ಸಿನಿಮಾ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರುವುದರಿಂದ ಅಲ್ಲಿಯೂ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತಿದೆ. ಜತೆಗೆ, ಮಾ. 6ರಿಂದ ಅಮೆರಿಕದಲ್ಲೂ ಸಿನಿಮಾ ಬಿಡುಗಡೆ ಆಗಲಿದೆ. ಸದ್ಯದಲ್ಲೇ ಲಂಡನ್ನಲ್ಲೂ ಬೇಡಿಕೆ ಹೆಚ್ಚಾಗಿದೆ. ನಿರ್ದೇಶಕ ಆಕಾಶ್ ಹಾಗೂ ನಟ ರಮೇಶ್ ಅರವಿಂದ್ ಮುಂದಿನ ವಾರ ಲಂಡನ್ಗೆ
ತೆರಳಿ ಅಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆ ಪಡೆಯಲಿದ್ದಾರೆ. ಮತ್ತೊಂದೆಡೆ ಚಿತ್ರಕ್ಕೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ಕನ್ನಡೇತರ ಚಿತ್ರರಂಗಗಳ ಗಮನವನ್ನೂ ಸೆಳೆದಿದ್ದು, ರಿಮೇಕ್ಗೂ ಬೇಡಿಕೆ ಬಂದಿದೆಯಂತೆ. ‘ಶಿವಾಜಿ ಸುರತ್ಕಲ್ ರಿಮೇಕ್ ಬಗ್ಗೆ ಹಿಂದಿ, ತಮಿಳು ಹಾಗೂ ತೆಲುಗು ಚಿತ್ರರಂಗಗಳಿಂದ ಪ್ರತ್ಯೇಕ ಬೇಡಿಕೆ ಬಂದಿದೆ. ಸದ್ಯ ಮಾತುಕತೆ ನಡೆಯುತ್ತಿದ್ದು, ಇನ್ನೂ ಯಾವುದೂ ಅಂತಿಮವಾಗಿಲ್ಲ’ ಎಂದಿದ್ದಾರೆ ನಿರ್ದೇಶಕರು. ಕೆ.ಎನ್.ರೇಖಾ, ಅನೂಪ್ ಗೌಡ ನಿರ್ವಣದ ಈ ಸಿನಿಮಾದಲ್ಲಿ ರಮೇಶ್ ಅರವಿಂದ್ ಅವರ ಜತೆ ನಾಯಕಿಯಾಗಿ ರಾಧಿಕಾ ನಾರಾಯಣ್ ಕಾಣಿಸಿ ಕೊಂಡಿದ್ದಾರೆ. ಉಳಿದ ಪ್ರಮುಖಪಾತ್ರಗಳಲ್ಲಿ ಆರೋಹಿ ನಾರಾಯಣ್, ರಘು ರಾಮನಕೊಪ್ಪ, ಪಿ.ಡಿ.ಸತೀಶ್ ಮುಂತಾದವರು ನಟಿಸಿದ್ದಾರೆ.