ಭಾವತೀರದಲ್ಲಿ ದೀಪಿಕಾ ಯಾನ

dipika jan 10 2020
Published on

ಬೆಂಗಳೂರು: ಅವಳು ಆಕಾಶದಷ್ಟು ಕನಸು ಹೊತ್ತವಳು, ನೋಡಲು ಅಂದಗಾತಿ. ಬಣ್ಣ ಬಣ್ಣದ ಬಟ್ಟೆ, ಕಿವಿಯೋಲೆ, ಮೂಗುತಿ ಧರಿಸುವುದು ಅವಳಿಗೆ ಇಷ್ಟ. ಸಂಗೀತದೆಡೆಗೆ ತುಸು ಒಲವು ಜಾಸ್ತಿ. ಓದೋ ಹುಡುಗಿಯಾದ್ದರಿಂದ ಸಹಜವಾಗಿ ಸ್ನೇಹಿತರ ಜತೆಗೆ ಒಂದಷ್ಟು ಸಲುಗೆ, ಸ್ವಲ್ಪ ಆಕರ್ಷಣೆ. 15 ವರ್ಷದ ಹುಡುಗಿಯಾದರೂ, ತನ್ನ ಮಧ್ಯಮ ವರ್ಗದ ಕುಟುಂಬದ ಸ್ಥಿತಿ ಆಕೆ ಬಲ್ಲಳು. ಹೀಗಿರುವಾಗಲೇ ಆಕೆಯ ಮೇಲೆ ಬೀಳುತ್ತೆ ಪಕ್ಕದ ಮನೆಯ ವ್ಯಕ್ತಿಯ ಕೆಟ್ಟ ಕಣ್ಣು. ಆಕೆಯಿಂದ ಕಡೆಗಣಿಸಲ್ಪಟ್ಟ ಆತ ಒಂದು ದಿನ ಮುಂಜಾನೆ ಆಸಿಡ್ ಎರಚಿ ಕಣ್ಮರೆಯಾಗುತ್ತಾನೆ. ಆಕೆ ನೆಲಕಚ್ಚುತ್ತಾಳೆ, ಸುಟ್ಟ ಚಂದದ ಕನಸು ಮತ್ತು ನೂರಾರು ಆಸೆಗಳ ಜತೆಯಲ್ಲಿ!

ಕನ್ನಡಿ ಮುಂದೆ ನಿಂತ ಮಾಲತಿ (ದೀಪಿಕಾ ಪಡುಕೋಣೆ) ತನ್ನನ್ನು ತಾನು ನೋಡಿಕೊಳ್ಳುತ್ತಾಳೆ. ‘ಕಿವಿ ಇಲ್ಲ, ಮೂಗಿಲ್ಲ. ಜುಮಕಿ ಹಾಕಿಕೊಳ್ಳುವುದಾದರೂ ಎಲ್ಲಿ..?’ ಎಂಬ ಸಂಭಾಷಣೆ ಆಕೆಯ ಬಾಯಿಂದ ಹೊರಡುತ್ತದೆ. ಆಸಿಡ್ ದಾಳಿಯ ಕರಾಳ ಮುಖ ಹೇಗಿರುತ್ತದೆ ಎಂಬುದನ್ನು ಸಣ್ಣ ಉದಾಹರಣೆ ಮೂಲಕ ತೋರಿಸಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜಾರ್. 2005ರಲ್ಲಿ ಲಕ್ಷ್ಮೀ ಅಗರ್​ವಾಲ್ ಮೇಲೆ ನಡೆದ ಆಸಿಡ್ ದಾಳಿಯನ್ನೇ ಸ್ಪೂರ್ತಿ ಆಗಿಸಿಕೊಂಡು, ‘ಚಪಾಕ್’ ಸಿನಿಮಾ ಮಾಡಿರುವ ಮೇಘನಾ, ಕೆಲ ವಸ್ತು ವಿಷಯಗಳನ್ನಷ್ಟೇ ಕೇಂದ್ರೀಕರಿಸಿ ಸಿನಿಮಾ ಮಾಡಿದಂತಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಲಕ್ಷ್ಮೀ

ಅಗರ್​ವಾಲ್ ಬದುಕಲ್ಲಿ ನಡೆದ ಘಟನೆಗಳನ್ನು ನಿರ್ದೇಶಕರು ಮುಟ್ಟಲು ಹೋಗಿಲ್ಲ. ಬದಲಿಗೆ ಆಸಿಡ್ ದಾಳಿ ಮತ್ತು ಅದರ ವಿರುದ್ಧ ಆಕೆಯ ಹೋರಾಟ ‘ಚಪಾಕ್’ನಲ್ಲಿ ಕಾಣಿಸುತ್ತದೆ. ಗಮನಿಸಬೇಕಾದ ವಿಚಾರ ಏನೆಂದರೆ, ಈ ಘಟನೆ ನಡೆದು ಎಷ್ಟೋ ವರ್ಷಗಳೇ ಆಗಿವೆ. ಲಕ್ಷ್ಮೀ ಅಗರ್​ವಾಲ್ ಬಗ್ಗೆ ಬಹುತೇಕರಿಗೆ ಗೊತ್ತು. ಸುದ್ದಿ ಮಾಧ್ಯಮಗಳಲ್ಲಿಯೂ ಅಂದಿನ ಆಸಿಡ್ ದಾಳಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಆ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು, ಟಿಪಿಕಲ್ ಡಾಕ್ಯುಮೆಂಟರಿ ಆಗುವಂಥ ವಿಷಯವನ್ನು ಕಿರು ಅವಧಿಯಲ್ಲಿ ಮನಮುಟ್ಟುವಂಥ ಸಿನಿಮಾ ಮಾಡಿದ್ದು ನಿರ್ದೇಶಕಿ ಮೇಘನಾ ಹೆಚ್ಚುಗಾರಿಕೆ. ಅಷ್ಟೇ ಅಲ್ಲ, ಯಾಕೆ ಸಲೀಸಾಗಿ ಎಲ್ಲರ ಕೈಗೆ ಆಸಿಡ್ ಸಿಗುತ್ತದೆ? ಅದರಿಂದ ಎಷ್ಟೆಲ್ಲ ಮನೆಗಳ ದೀಪಗಳು ಕತ್ತಲಿಗೆ ಸರಿದಿವೆ ಎಂಬುದನ್ನು ಹೇಳುವ ಪ್ರಯತ್ನ ಅವರಿಂದಾಗಿದೆ.

ಅಂದಹಾಗೆ, ಇಡೀ ಚಿತ್ರದ ಆತ್ಮವೆಂದರೆ ಅದು ದೀಪಿಕಾ ಮತ್ತು ಅವರ ನಟನೆ! ಗ್ಲಾಮರ್ ಬದಿಗೆ ಸರಿಸಿ ಆಸಿಡ್ ಸಂತ್ರಸ್ತೆಯಾಗಿ ಸಿನಿಮಾದಲ್ಲಿ ಅವರು ಕಾಣಿಸಿಕೊಂಡ ಪರಿ ನಿಜಕ್ಕೂ ಅದ್ಭುತ. ಪೋಷಕ ಪಾತ್ರದಲ್ಲಿ ವಿಕ್ರಾಂತ್ ಮೆಸ್ಸಿ ಎನ್​ಜಿಒ ಸದಸ್ಯನಾಗಿ ಕಾಣಿಸಿಕೊಂಡು ಅಚ್ಚುಕಟ್ಟಾದ ಅಭಿನಯ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಭಾವುಕ ಕಥೆಗೆ ಕೈ ಜೋಡಿಸುತ್ತದೆ. ತೆರೆಮೇಲೆ ತೇಲಿಬರುವ ಎರಡು ಹಾಡುಗಳು ಗುನುಗುವಂತೆ ಮಾಡುತ್ತವೆ. ಮೊನಚಾದ ಸಂಭಾಷಣೆ ಚಿತ್ರದ ಹೈಲೈಟ್. ಒಟ್ಟಿನಲ್ಲಿ ಈ ಹಿಂದಿನ ದೀಪಿಕಾ ಸಿನಿಮಾಕ್ಕೂ ‘ಚಪಾಕ್’ಗೂ ತುಂಬ ಸಾಮ್ಯತೆ ಇದೆ. ಅರೆಕ್ಷಣ ಸಿನಿಮಾ ಭಾವತೀರ ಯಾನಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.

ಮಂಜು ಕೊಟಗುಣಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net