ಇಂಡಿಯನ್-2ನಲ್ಲಿ ದೀಪಿಕಾ, ಕತ್ರಿನಾ; ಕಮಲ್ ಚಿತ್ರದಿಂದ ಕಾಜಲ್ ಔಟ್

Indian 2
Published on

ಕಮಲ್ ಹಾಸನ್ ಮತ್ತು ನಿರ್ದೇಶಕ ಶಂಕರ್ ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಇಂಡಿಯನ್’ ಚಿತ್ರವು 1996ರಲ್ಲಿ ಬಿಡುಗಡೆಯಾಗಿ ಸೂಪರ್​ಹಿಟ್ ಆಗಿತ್ತು. ಅದಾಗಿ 21 ವರ್ಷಗಳ ಬಳಿಕ 2017ರಲ್ಲಿ ಸೀಕ್ವಲ್ ಘೋಷಣೆಯಾಯಿತು. 2019ರಲ್ಲಿ ಚಿತ್ರೀಕರಣ ಕೂಡ ಪ್ರಾರಂಭವಾಯಿತು. ಆದರೆ, 2020ರ ಫೆಬ್ರವರಿಯಲ್ಲಿ ಶೂಟಿಂಗ್ ಸೆಟ್​ನಲ್ಲಿ ನಡೆದ ಅವಘಡದಲ್ಲಿ ಮೂವರು ಕಾರ್ವಿುಕರು ಜೀವ ಕಳೆದುಕೊಂಡು, 10 ಮಂದಿಗೆ ಪೆಟ್ಟಾಗಿತ್ತು. ಅದಾದ ಕೆಲ ದಿನಗಳಲ್ಲೇ ಕರೋನಾ ಕಾಟ ಶುರುವಾಯಿತು. ಶೇಕಡಾ 60ರಷ್ಟು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೂ 100 ದಿನಗಳಷ್ಟು ಚಿತ್ರೀಕರಣ ಬಾಕಿಯಿದೆ. ಆದರೆ, ಇದುವರೆಗೂ ಒಂದಲ್ಲಾ ಒಂದು ಕಾರಣಕ್ಕೆ ‘ಇಂಡಿಯನ್ 2’ ಚಿತ್ರದ ಚಿತ್ರೀಕರಣ ಮುಂದೂಡಲ್ಪಡುತ್ತಿದೆ.

ಕಮಲ್ ಹಾಸನ್​ರ ಕರಿಯರ್​ನಲ್ಲೇ ಅತಿ ದೊಡ್ಡ ಬಜೆಟ್ ಚಿತ್ರ ಎನ್ನಲಾಗಿದ್ದ ‘ಇಂಡಿಯನ್ 2’ ಇನ್ನು ಪ್ರಾರಂಭವಾಗುವುದೇ ಇಲ್ಲ ಎನ್ನುತ್ತಿರುವಾಗಲೇ ಕಾಲಿವುಡ್​ನಿಂದ ಒಂದು ಸಿಹಿಸುದ್ದಿ ಹರಿದು ಬಂದಿದೆ. ಹೌದು, ಮೂಲಗಳ ಪ್ರಕಾರ ‘ಇಂಡಿಯನ್ 2’ ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆಯಂತೆ. ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತಷ್ಟು ಹಿಗ್ಗಿಸಲು ಚಿತ್ರತಂಡ ಯೋಚಿಸುತ್ತಿದೆ ಎನ್ನಲಾಗಿದೆ. ಆದರೆ, ಈ ಐದು ವರ್ಷಗಳಲ್ಲಿ ಮದುವೆಯಾಗಿ, ಇದೇ ಏಪ್ರಿಲ್​ನಲ್ಲಿ ಮುದ್ದಾದ ಗಂಡುಮಗುವಿಗೆ ಜನ್ಮ ನೀಡಿರುವ ನಾಯಕಿ ಕಾಜಲ್ ಅಗರ್ವಾಲ್ ಈಗ ಮತ್ತೆ ಚಿತ್ರದಲ್ಲಿ ಮುಂದುವರಿಯುವುದು ಕಷ್ಟ ಎನ್ನಲಾಗಿದೆ.

ಹೀಗಾಗಿಯೇ ಬಾಲಿವುಡ್​ನ ಟಾಪ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್​ರನ್ನು ‘ಇಂಡಿಯನ್ 2’ಗೆ ಆಯ್ಕೆ ಮಾಡಿಕೊಳ್ಳಲು ಚಿತ್ರತಂಡ ಆಲೋಚಿಸುತ್ತಿದೆಯಂತೆ. ಮತ್ತೊಂದೆಡೆ ನಿರ್ದೇಶಕ ಶಂಕರ್ ಸದ್ಯ ರಾಮ್ರಣ್ ತೇಜಾ ನಾಯಕನಾಗಿರುವ 15ನೇ ಚಿತ್ರದಲ್ಲಿ ಬಿಜಿಯಿದ್ದು, ಅದಾದ ಬಳಿಕವಷ್ಟೇ ‘ಇಂಡಿಯನ್ 2’ ಪ್ರಾರಂಭವಂತೆ. ಸದ್ಯದ ಮಾಹಿತಿ ಪ್ರಕಾರ ಚಿತ್ರ 2023ರಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net