ಲಕ್ಷ್ಮಿಗಾಗಿ ದೀಪಿಕಾ ಕಣ್ಣೀರು

depika jan 032020
Published on

ಶುಕ್ರವಾರ ಮುಂಬೈನಲ್ಲಿ ‘ಚಪಾಕ್’ ಚಿತ್ರದ ಶೀರ್ಷಿಕೆ ಗೀತೆಯ ಅನಾವರಣ ಕಾರ್ಯಕ್ರಮ ನಡೆಯಿತು. ಸಿನಿಮಾ ತಂಡ ವೇದಿಕೆ ಮೇಲೆ ನೆರೆದಿತ್ತು. ಇಡೀ ಚಿತ್ರಕ್ಕೆ ಸ್ಪೂರ್ತಿಯಾದ ಲಕ್ಷ್ಮೀ ಅಗರ್​ವಾಲ್ ಸಹ ಕಾರ್ಯಕ್ರಮದಲ್ಲಿದ್ದರು. ಹಾಡಿನ ಅನಾವರಣ ಆಗಿದ್ದರಿಂದ ಎಲ್ಲರ ಮೊಗದಲ್ಲಿ ಖುಷಿಯ ಕಳೆ ಕಾಣಿಸಬೇಕಿತ್ತು. ಆದರೆ, ಅಲ್ಲಾಗಿದ್ದೇ ಬೇರೆ! ದೀಪಿಕಾ, ಲಕ್ಷ್ಮೀ ಕಣ್ಣಲ್ಲಿ ನೀರು ತುಂಬಿತ್ತು. ಆ ಭಾವುಕ ಗಳಿಗೆಗೆ ಕಾರಣವಾಗಿದ್ದು, ಚಿತ್ರದ ಶೀರ್ಷಿಕೆ ಗೀತೆ.

‘ಚಪಾಕ್’ನಲ್ಲಿ ಲವ್, ರೊಮ್ಯಾನ್ಸ್​ಗೆ ಸಂಬಂಧಿಸಿದ ಹಾಡುಗಳಿವೆ. ಜತೆಗೆ ಶೀರ್ಷಿಕೆ ಗೀತೆಯೂ ಇದೆ. ಆ ಗೀತೆಯನ್ನು ನೀವು ಊಹಿಸಿಕೊಳ್ಳಲೂ ಕಷ್ಟವಾಗಬಹುದು. ಆದರೆ, ಆ ಹಾಡೇ ಇಡೀ ಚಿತ್ರದ ಆತ್ಮ’- ಎಂದು ನಿರ್ದೇಶಕಿ ಮೇಘನಾ ಗುಲ್ಜಾರ್ ಹೇಳಿಕೊಳ್ಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಗಾಯಕ ಶಂಕರ್ ಮಹಾದೇವನ್ ಶೀರ್ಷಿಕೆ ಗೀತೆಯ ಕೆಲ ಸಾಲುಗಳನ್ನು ಹಾಡಿದರು. ಅದನ್ನು ಕೇಳುತ್ತಿದ್ದಂತೆ ಲಕ್ಷ್ಮೀ ಅಗರ್​ವಾಲ್ ದೀಪಿಕಾ ಭುಜಕ್ಕೆ ಒರಗಿ ಭಾವುಕರಾದರು. ಅವರನ್ನು ಸಂಭಾಳಿಸುವ ಪ್ರಯತ್ನವನ್ನು ದೀಪಿಕಾ ಪಡುಕೋಣೆ ಮಾಡಿದರಾದರೂ, ಲಕ್ಷ್ಮೀ ಸುಮ್ಮನಾಗಲಿಲ್ಲ. ಬಳಿಕ ನೋಡ ನೋಡುತ್ತಿದ್ದಂತೆ ದೀಪಿಕಾ ಕಣ್ಣಲ್ಲೂ ನೀರು ಜಿನುಗಿದವು!

ಹಾಗಾದರೆ ಆ ಗೀತೆಯಲ್ಲೇನಿದೆ? ‘ಚಪಾಕ್’ ಸಿನಿಮಾ ಆಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್​ವಾಲ್ ಜೀವನದ ಕಥೆ. ಲಕ್ಷ್ಮೀ ಪಾತ್ರವನ್ನು ದೀಪಿಕಾ, ಮಾಲತಿಯಾಗಿ ನಿಭಾಯಿಸಿದ್ದು, ಆ ಘೋರ ಕಥೆಯ ಸಣ್ಣ ಝುಲಕ್​ಅನ್ನು ಶೀರ್ಷಿಕೆ ಗೀತೆಯಲ್ಲಿ ನಿರ್ದೇಶಕರು ಪೋಣಿಸಿದ್ದಾರೆ. ಆಸಿಡ್ ಎರಚಿದ ಬಳಿಕ ಆಕೆಯ ಜೀವನದಲ್ಲಾದ ಘಟನೆಗಳನ್ನು ಒಂದೊಂದಾಗಿ ತೆರೆಮೇಲೆ ತೋರಿಸಲಾಗಿದೆ. ಮಾನಸಿಕವಾಗಿ ನೊಂದ ಮಾಲತಿ ಹೇಗೆ ಕತ್ತಲೆಗೆ ಸರಿಯುತ್ತಾಳೆ. ಆ ಕೂಪದಿಂದ ಹೊರಬಂದು ಹೇಗೆ ಜನಾಂದೋಲನಕ್ಕೆ ಕಾರಣಳಾಗುತ್ತಾಳೆ. ಕೋರ್ಟ್​ನ ಕಟಕಟೆ ಏರಿ ನ್ಯಾಯಕ್ಕಾಗಿ ಆಕೆಯ ಹೋರಾಟದ ಪರಿ ಹೇಗಿರುತ್ತದೆ. ಆರಂಭದ ಕಷ್ಟದ ದಿನಗಳಿಂದ ಹಿಡಿದು ಕೊನೆಗೆ ನ್ಯಾಯ ಸಿಗುವವರೆಗಿನ ಎಲ್ಲ ಏಳುಬೀಳಿನ ಕಹಾನಿಯನ್ನು ಒಂದೇ ಹಾಡಿನಲ್ಲಿ ಬೆರೆಸಲಾಗಿದೆ. ಫಸ್ಟ್

ಲುಕ್ ಮೂಲಕವೇ ಗಮನಸೆಳೆದಿದ್ದ ‘ಚಪಾಕ್’ ಟ್ರೇಲರ್ ಬಿಡುಗಡೆ ಸಂದರ್ಭದಲ್ಲೂ ದೀಪಿಕಾ ಕಣ್ಣೀರಿಟ್ಟಿದ್ದರು. ಈಗ ಶೀರ್ಷಿಕೆ ಗೀತೆಯ ಅನಾವರಣದಲ್ಲೂ ಭಾವುಕರಾಗಿದ್ದಾರೆ. ಅಂದಹಾಗೆ ಈ ಸಿನಿಮಾ ಜನವರಿ 10ಕ್ಕೆ ವಿಶ್ವಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ನಾಯಕಿ ಮಾತ್ರವಲ್ಲದೆ ನಿರ್ವಪಕಿಯಾಗಿಯೂ ದೀಪಿಕಾ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net