ದೀಪಿಕಾ ಸಿಕ್ಸರ್!; ಅರ್ಧ ಡಜನ್ ಚಿತ್ರಗಳಿಗೆ ಸಹಿ

Deepika Padukone
Published on

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ವರ್ಷಪೂರ್ತಿ ಕೈಗೆ ಸಿಗದಂತಾಗಿದ್ದಾರೆ. ಏಕೆಂದರೆ, ಕೆಲವೇ ತಿಂಗಳ ಅಂತರದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಅರ್ಧ ಡಜನ್ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಬಾಲಿವುಡ್​ನ ಇನ್ನುಳಿದ ನಾಯಕಿಯರ ಸಿನಿಮಾ ಪಟ್ಟಿ ನೋಡಿದರೆ, ದೀಪಿಕಾ ಮುಂಚೂಣಿಯಲ್ಲಿದ್ದಾರೆ. 2020ರ ಆರಂಭದಲ್ಲಿ ದೀಪಿಕಾ ಪಡುಕೋಣೆ ನಟನೆಯ ‘ಚಪಾಕ್’ ಸಿನಿಮಾ ಬಿಡುಗಡೆಯಾಗಿತ್ತು. ಅದಾದ ಬಳಿಕ ಬೇರೆ ಸಿನಿಮಾಗಳಿಗೆ ಅವರು ಸಹಿ ಮಾಡಿರಲಿಲ್ಲ. ಇನ್ನೇನು ಬೇರೆ ಸಿನಿಮಾ ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಕರೊನಾ ಹಾವಳಿ ಶುರುವಾಯಿತು. ಇದೀಗ ಸರಣಿ ಸಿನಿಮಾಗಳನ್ನು ಒಪ್ಪಿಕೊಂಡು ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ.

ಸದ್ಯ ದೀಪಿಕಾ, ಶಕುನ್ ಬತ್ರಾ ನಿರ್ದೇಶನದ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾ, ಶಾರುಖ್ ಖಾನ್ ಜತೆಗೆ ‘ಪಠಾಣ್’, ಪ್ರಭಾಸ್ ಜತೆಗಿನ ಚಿತ್ರ, ‘ದಿ ಇಂಟರ್ನ್’ ಚಿತ್ರದ ರಿಮೇಕ್, ‘ಮಹಾಭಾರತ್’ ಸಿನಿಮಾ ಸೇರಿ ಇತ್ತೀಚೆಗೆ ಹೃತಿಕ್ ರೋಷನ್ ಜತೆಗೆ ‘ಫೈಟರ್’ ಚಿತ್ರಕ್ಕೂ ಸಹಿ ಮಾಡಿದ್ದಾರೆ. ಈಗಾಗಲೇ ಶಕುನ್ ಬತ್ರಾ ನಿರ್ದೇಶನದ ಸಿನಿಮಾದ ಶೂಟಿಂಗ್ ಬಹುತೇಕ ಕೊನೇ ಹಂತದಲ್ಲಿದೆ. ಇದರ ನಡುವೆ ಶಾರುಖ್ ‘ಪಠಾಣ್’ ಚಿತ್ರೀಕರಣ ಶುರುವಾಗಿದ್ದು, ದೀಪಿಕಾ ಸಹ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲ ಸಿನಿಮಾಗಳನ್ನೇನೋ ದೀಪಿಕಾ ಒಪ್ಪಿಕೊಂಡಿದ್ದಾರೆ ನಿಜ. ಆದರೆ, ಹಾಗೆ ಒಪ್ಪಿಕೊಂಡ ಎಲ್ಲ ಆರೂ ಸಿನಿಮಾಗಳನ್ನು ಅವರು ಇದೇ ವರ್ಷದಲ್ಲಿ ಮುಗಿಸುವುದಿಲ್ಲ. ಬದಲಿಗೆ ಈ ಆರು ಸಿನಿಮಾಗಳ ಪೈಕಿ ಎರಡು ಸಿನಿಮಾಗಳನ್ನು ಮಾತ್ರ ಈ ವರ್ಷ ಮುಗಿಸುತ್ತಾರಂತೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net