

ರಣವೀರ್ ಸಿಂಗ್ ನಟನೆಯ ‘83’ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತದ ಕ್ರಿಕೆಟ್ ತಂಡ 1983ರಲ್ಲಿ ವಿಶ್ವಕಪ್ ಗೆದ್ದಿತ್ತು, ಆ ರೋಚಕ ಕಥಾನಕವನ್ನು ನಿರ್ದೇಶಕ ಕಬೀರ್ ಖಾನ್ ತೆರೆ ಮೇಲೆ ತರುತ್ತಿದ್ದಾರೆ. ಇದರಲ್ಲಿ ರಣವೀರ್ ಕಪಿಲ್ ದೇವ್ ಪಾತ್ರ ಮಾಡಿದರೆ, ಅವರ ಪತ್ನಿ ದೀಪಿಕಾ ಕಪಿಲ್ ಪತ್ನಿ ರೋಮಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ರೋಮಿ ಲುಕ್ ಹೇಗಿರಲಿದೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ಅದನ್ನು ಸ್ವತಃ ರಣವೀರ್ ಮತ್ತು ದೀಪಿಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿ ವೈರಲ್ ಆಗಿತ್ತು, ಈಗ ಕಪಿಲ್ ಅವರ ಪತ್ನಿ ರೋಮಿ ದೇವ್ ಲುಕ್ಗೆ ಮೆಚ್ಚುಗೆ ವ್ಯಕ್ತವಾಗಿ, ಎಲ್ಲರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಬರೀ ವಿಶ್ವಕಪ್ ಗೆದ್ದ ಕಥೆ ಇಲ್ಲ, ಜತೆಗೆ ಕಪಿಲ್ ದೇವ್ ಅವರ ಜೀವನಗಾಥೆಯೂ ಇರಲಿದೆ. ಈಗಾಗಲೇ ರಣವೀರ್ ಸಿಂಗ್, ಕಪಿಲ್ದೇವ್ ರೀತಿ ಬ್ಯಾಟ್ ಮಾಡುವುದು ಸೇರಿ ಸಾಕಷ್ಟು ವಿಚಾರಗಳನ್ನು ಸ್ವತಃ ಕಪಿಲ್ ಅವರಿಂದಲೇ ತಿಳಿದುಕೊಂಡಿದ್ದಾರೆ. ತಹೀರ್ ರಾಜ್ ಭಾಸಿನ್ ಅವರು ಸುನೀಲ್ ಗಾವಸ್ಕರ್ ಆಗಿ, ಕೃಷ್ಣಮಾಚಾರಿ ಶ್ರೀಕಾಂತ್ ಪಾತ್ರದಲ್ಲಿ ತಮಿಳಿನ ಜೀವಾ, ಮೊಹಿಂದರ್ ಅಮರ್ನಾಥ್ ಪಾತ್ರದಲ್ಲಿ ಸಾಕಿಬ್ ಸಲೀಮ್ ಸಂದೀಪ್ ಪಾಟೀಲ್ ಆಗಿ ಚಿರಾಗ್ ಪಾಟೀಲ್ ನಟಿಸುತ್ತಿದ್ದಾರೆ. ಏ.10ಕ್ಕೆ ಈ ಸಿನಿಮಾ ತೆರೆಕಾಣಲಿದೆ. -ಏಜೆನ್ಸೀಸ್