ಮನದ ಬಯಕೆ ಬಿಚ್ಚಿಟ್ಟ ದೀಪಿಕಾ ಪಡುಕೋಣೆ

Deepika
Published on

ದೀಪಿಕಾ ಪಡುಕೋಣೆ ಇದುವರೆಗೂ 30 ಪ್ಲಸ್ ಚಿತ್ರಗಳಲ್ಲಿ ನಟಿಸಿದರೂ ದಕ್ಷಿಣದ ಚಿತ್ರಗಳಲ್ಲಿ ನಟಿಸಿದ್ದು ಕಡಿಮೆಯೇ. ಕನ್ನಡದ ‘ಐಶ್ವರ್ಯಾ’ ಬಿಟ್ಟರೆ, ತಮಿಳಿನ ‘ಕೊಚ್ಚಾಡಿಯನ್’ ಚಿತ್ರದಲ್ಲಿ ಅವರು ನಟಿಸಿದ್ದರು. ಈಗ ಪ್ರಭಾಸ್ ಅಭಿನಯದ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ನಟಿಸುವ ಮೂಲಕ ದಕ್ಷಿಣಕ್ಕೆ ಮರಳಿದ್ದಾರೆ. ಸದ್ಯದಲ್ಲೇ ದಕ್ಷಿಣದ ಇನ್ನೂ ಒಂದು ಚಿತ್ರದಲ್ಲಿ ಅವರು ನಟಿಸಿದರೆ ಆಶ್ಚರ್ಯವೇನಿಲ್ಲ.

ಏಕೆಂದರೆ, ದಕ್ಷಿಣದ ಮತ್ತೊಬ್ಬ ಸ್ಟಾರ್ ನಟನ ಜತೆ ನಟಿಸುವ ಇಂಗಿತವನ್ನು ದೀಪಿಕಾ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ, ಅಮೆಜಾನ್ ಪ್ರೖೆಂನಲ್ಲಿ ದೀಪಿಕಾ ನಟನೆಯ ‘ಗೆಹ್ರಾಯಿಯಾಂ’ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದ ವರ್ಚುವಲ್ ಪ್ರಚಾರದ ವೇಳೆ ಅವರಿಗೆ ಕೆಲವೊಂದಿಷ್ಟು ಪ್ರಶ್ನೆಗಳು ತೂರಿಬಂದಿದ್ದವು. ಅದರಲ್ಲೊಂದು ‘ದಕ್ಷಿಣದ ಯಾವ ನಟನ ಜತೆ ತೆರೆಹಂಚಿಕೊಳ್ಳುವ ಬಯಕೆ ನಿಮ್ಮದು?’ ಎಂಬುದು.

ಅದಕ್ಕೆ ಉತ್ತರವಾಗಿ ದೀಪಿಕಾ ಕೊಟ್ಟ ಉತ್ತರ ಜೂ.ಎನ್​ಟಿಆರ್. ‘ಮುಂಬರುವ ಸಿನಿಮಾಗಳಲ್ಲಿ ಒಂದೊಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಜೂ.ಎನ್​ಟಿಆರ್ ಜತೆ ನಟಿಸಲು ನಾನು ಸಿದ್ಧಳಿದ್ದೇನೆ’ ಎಂದಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net