

ಮಹಾಭಾರತವನ್ನಾಧರಿಸಿದ ‘ದ್ರೌಪದಿ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ ದ್ರೌಪದಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲವು ತಿಂಗಳುಗಳ ಹಿಂದೆ ಕೇಳಿ ಬಂದಿತ್ತು. ಆದರೆ, ದ್ರೌಪದಿಗೂ ಮುನ್ನವೇ ದೀಪಿಕಾ ಅವರನ್ನು ಸೀತೆಯನ್ನಾಗಿ ಮಾಡಲು ಹೊರಟಿದ್ದಾರೆ ನಿರ್ವಪಕ ಮಧು ಮಂಟೇನಾ. ‘ದ್ರೌಪದಿ’ ಚಿತ್ರವನ್ನು ನಿರ್ವಿುಸಬೇಕಿದ್ದ ಅವರು, ಆ ಚಿತ್ರವನ್ನು ಸ್ವಲ್ಪ ಮುಂದಕ್ಕೆ ಹಾಕಿ, ಅದರ ಬದಲು ರಾಮಾಯಣವನ್ನು ತೆರೆಗೆ ತರುವುದಕ್ಕೆ ಹೊರಟಿದ್ದಾರೆ. ಸೀತೆಯ ಪಾತ್ರವನ್ನು ದೀಪಿಕಾ ಅವರಿಗೆ ಕೊಟ್ಟಿರುವುದು ವಿಶೇಷ.
ಹಾಗೆ ನೋಡಿದರೆ, ಬಾಲಿವುಡ್ನಲ್ಲಿ ರಾಮಾಯಣವನ್ನಾಧರಿಸಿ ಚಿತ್ರ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಪ್ರಭಾಸ್ ಅಭಿನಯದಲ್ಲಿ ರಾಮಾಯಣವನ್ನಾಧರಿಸಿ ‘ಆದಿಪುರುಷ್’ ಎಂಬ ಚಿತ್ರದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಲಿದೆ. ಇದರ ಮಧ್ಯೆಯೇ, ರಾಮಾಯಣವನ್ನು ಸೀತೆಯ ದೃಷ್ಟಿಕೋನದಲ್ಲಿ ನೋಡುವ ಪ್ರಯತ್ನವೊಂದು ಆಗುತ್ತಿದ್ದು, ‘ಸೀತೆ’ ಎಂಬ ಚಿತ್ರ ನಿರ್ವಣವಾಗುತ್ತಿದೆ.
‘ಬಾಹುಬಲಿ’ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಸೀತೆಯಾಗಿ ಕರೀನಾ ಕಪೂರ್ ಕಾಣಿಸಿಕೊಳ್ಳುತ್ತಿದ್ದು, ಅದಕ್ಕಾಗಿ 12 ಕೋಟಿ ರೂ ಸಂಭಾವನೆಯನ್ನು ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಇದರ ಮಧ್ಯೆ, ರಾಮಾಯಣದ ಇನ್ನೊಂದು ವ್ಯಾಖ್ಯಾನವನ್ನು ಮಾಡುವುದಕ್ಕೆ ಮಧು ಮಂಟೇನ ಹೊರಟಿದ್ದಾರೆ. ಈ ಚಿತ್ರದಲ್ಲಿ ರಾಮ-ಸೀತೆಯಾಗಿ ತೆಲುಗು ನಟ ಮಹೇಶ್ ಬಾಬು ಮತ್ತು ದೀಪಿಕಾ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ರಾವಣನ ಪಾತ್ರಕ್ಕೆ ಹೃತಿಕ್ ರೋಶನ್ ಸೂಕ್ತ ಎಂಬ ತೀರ್ವನಕ್ಕೆ ಬರಲಾಗಿದೆಯಂತೆ.