ಸಂಜಯ್ ಲೀಲಾ ಬನ್ಸಾಲಿಯ ಡಾಕು ರಾಣಿ ದೀಪಿಕಾ?

IMG-20210526-WA0006
Published on

ಆಲಿಯಾ ಭಟ್ ಅಭಿನಯದ ‘ಗಂಗೂಬಾಯಿ ಕಥೈವಾಡಿ’ ನಂತರ ಸಂಜಯ್ ಲೀಲಾ ಬನ್ಸಾಲಿ, ‘ಬೈಜು ಬಾವ್ರಾ’ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಈಗಾಗಲೇ ಹೊರಬಿದ್ದಿದೆ.

ಈ ಚಿತ್ರದಲ್ಲಿ ಡಾಕು ರಾಣಿ ರೂಪಮತಿಯ ಪಾತ್ರ ಬಹಳ ಪ್ರಮುಖವಾಗಿದ್ದು, ಈ ಪಾತ್ರಕ್ಕೆ ದೀಪಿಕಾ ಪಡುಕೋಣೆ ಸೂಕ್ತ ಎಂಬ ತೀರ್ವನಕ್ಕೆ ಬನ್ಸಾಲಿ ಬಂದಿದ್ದಾರಂತೆ. ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸುವುದಕ್ಕೆ ಅವರಿಗೆ ಆಫರ್ ಕೊಟ್ಟಿದ್ದು, ರಾಣಿ ರೂಪಮತಿಯಾಗಿ ಕಾಣಿಸಿಕೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಇದೆ.

‘ಬೈಜು ಬಾವ್ರಾ’ ಚಿತ್ರದಲ್ಲಿ ದೀಪಿಕಾ ಏನಾದರೂ ನಟಿಸುವುದಕ್ಕೆ ಒಪ್ಪಿಕೊಂಡರೆ, ಬನ್ಸಾಲಿ ಅಭಿನಯದ ನಾಲ್ಕನೇ ಚಿತ್ರದಲ್ಲಿ ನಟಿಸಿದಂತಾಗುತ್ತದೆ. ಇದಕ್ಕೂ ಮುನ್ನ ಬನ್ಸಾಲಿ ನಿರ್ದೇಶನದ ‘ರಾಮ್​ಲೀಲಾ’, ‘ಬಾಜಿರಾವ್ ಮಸ್ತಾನಿ’ ಮತ್ತು ‘ಪದ್ಮಾವತ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದರು. ‘ಬೈಜು ಬಾವ್ರಾ’ದಲ್ಲಿ ಅವರು ನಾಯಕಿಯಲ್ಲದಿದ್ದರೂ, ಚಿತ್ರದಲ್ಲಿನ ನಾಲ್ಕು ಪ್ರಮುಖ ಪಾತ್ರಗಳಲ್ಲಿ, ಅವರದ್ದೂ ಒಂದು. ಈಗಾಗಲೇ, ಬನ್ಸಾಲಿ ಮತ್ತು ದೀಪಿಕಾ ನಡುವೆ ಕೆಲವು ಸುತ್ತಿನ ಮಾತುಕತೆಗಳಾಗಿವೆ ಎಂದು ಹೇಳಲಾಗುತ್ತಿದೆ. ದೀಪಿಕಾ ಗ್ರೀನ್ ಸಿಗ್ನಲ್ ನೀಡುವುದು ಬಾಕಿ ಇದೆಯಾದರೂ, ಚಿತ್ರದಲ್ಲಿ ನಟಿಸುವುದಕ್ಕೆ ಉತ್ಸಾಹ ತೋರಿಸಿದ್ದಾರಂತೆ.

ಅಂದಹಾಗೆ, ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆದಿದ್ದು, ಮುಂದಿನ ವರ್ಷದ ಆರಂಭದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಮೊದಲಿಗೆ ‘ಗಂಗೂಬಾಯಿ ಕಥೈವಾಡಿ’ ಚಿತ್ರವನ್ನು ಪೂರ್ಣಗೊಳಿಸಿ ಬಿಡುಗಡೆ ಮಾಡಿ, ತಕ್ಷಣವೇ ಈ ಚಿತ್ರವನ್ನು ಬನ್ಸಾಲಿ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net