ಆತ್ಮಹತ್ಯೆ ನಿರ್ಧಾರದ ಬಗ್ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು!

jpg-3-780x470
Published on

ಮಾನಸಿಕ ಸ್ವಾಸ್ಥ್ಯದ ಬಗ್ಗೆ ದೀಪಿಕಾ ಪಡುಕೋಣೆ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಇತ್ತೀಚಿನ ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾಗಳಲ್ಲಿ ಅದನ್ನೇ ಪುನರುಚ್ಚರಿಸಿದ್ದಾರೆ. ಅದಕ್ಕೆ ಕಾರಣ, ಸುಶಾಂತ್ ಸಿಂಗ್ ರಜಪೂತ್ ಸಾವು! ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ದೀಪಿಕಾ ಆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ‘ನಾನೂ ಸಹ ಖಿನ್ನತೆಗೊಳಗಾಗಿ ಅದರಿಂದ ಹೊರಬಂದ ವ್ಯಕ್ತಿಯಾಗಿರುವುದರಿಂದ ಅದನ್ನೇ ಪುನಃ ಒತ್ತಿ ಹೇಳಲಾರೆ, ಆದರೆ ಒಂದಷ್ಟು ಅಂಶಗಳನ್ನು ಚಾಚೂ ತಪ್ಪದೆ ಪಾಲಿಸಲೇಬೇಕು’ ಎಂದಿದ್ದರು. ಇದೀಗ ಇದೇ ದೀಪಿಕಾ ಆತ್ಮಹತ್ಯೆ ನಿರ್ಧಾರದ ಕರಾಳತೆ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಹೌದು, ಆತ್ಮಹತ್ಯೆ ನಿರ್ಧಾರ ಕೈಗೊಳ್ಳುವ ಮನಸ್ಸುಗಳ ಆಗಿನ ಸ್ಥಿತಿ ಹೇಗಿರುತ್ತದೆ? ಯಾಕೆ ಆತ್ಮಹತ್ಯೆಗೆ ಶರಣಾಗುತ್ತಾರೆ ಎಂಬುದನ್ನು ನುರಿತ ವೈದ್ಯರೊಂದಿಗೆ ದೀಪಿಕಾ ಚರ್ಚೆ ಮಾಡಿದ್ದಾರೆ. ಸುದೀರ್ಘ 50 ನಿಮಿಷದ ವಿಡಿಯೋದಲ್ಲಿ ಖಿನ್ನತೆ, ಒಬ್ಬಂಟಿತನ ಹೀಗೆ ಒಂದಷ್ಟು ವಿಚಾರಗಳನ್ನು ಮುಕ್ತವಾಗಿ ಚರ್ಚಿಸಿದ್ದಾರೆ. ಅದಕ್ಕೆ ಪರಿಹಾರೋಪಾಯವನ್ನೂ ಹೇಳಿಕೊಂಡಿದ್ದಾರೆ. ‘15ರಿಂದ 25 ವಯಸ್ಸಿನವರ ಮನಸ್ಸಿನಲ್ಲಿ ಈ ಆತ್ಮಹತ್ಯೆ ಕುರಿತ ವಿಚಾರಗಳು ಹೆಚ್ಚು ಓಡಾಡುತ್ತಿರುತ್ತವೆ. ಅದನ್ನು ಆರಂಭ ಹಂತದಲ್ಲಿಯೇ ಅರಿಯಲು ಅಸಾಧ್ಯ. ಆದರೆ, ಖಿನ್ನತೆಗೆ ಒಳಗಾದವರು, ಅಂತ ವಿಚಾರವನ್ನು ಇನ್ನೊಬ್ಬರ ಬಳಿ ಶೇರ್​ ಮಾಡಿಕೊಳ್ಳುವುದಿಲ್ಲ. ಅದೇ ಅನಾಹುತಕ್ಕೆ ಕಾರಣ’ ಎಂದು ವೈದ್ಯರು ಅಭಿಪ್ರಾಯ ಹೊರಹಾಕಿದ್ದಾರೆ.

ಕಳೆದ ಹಲವು ವರ್ಷಗಳಿಂದ ಈ ಖಿನ್ನತೆಗೆ ಗುರಿಯಾಗಿ ತುಂಬ ನೊಂದಿದ್ದ ದೀಪಿಕಾ, ಕೊನೆಗೆ ಆ ನರಕದಿಂದ ಹೊರಬಂದಿದ್ದರು. ಅದ್ಯಾವ ಮಟ್ಟಿಗೆ ಅಂದರೆ, ತನಗಾದ ನೋವು ಬೇರೆಯವರಿಗೆ ಆಗಬಾರದೆಂಬ ಕಾರಣಕ್ಕೆ 2015ರಲ್ಲಿ ಮೆಂಟಲ್ ಹೆಲ್ತ್​ಗೆ ಸಂಬಂಧಿಸಿದ ‘ಲಿವ್ ಲವ್ ಲಾಫ್’ ಹೆಸರಿನ ಫೌಂಡೇಷನ್ ತೆರೆದಿದ್ದಾರೆ.
ಸುಶಾಂತ್​ ಸಾವಿನ ಬಳಿಕ, ‘ಮಾತನಾಡಿ, ಇನ್ನೊಬ್ಬರ ಜತೆ ಸಂವಹನ ನಡೆಸಿ, ನಿಮಗನಿಸಿದ್ದನ್ನು ಹಂಚಿಕೊಳ್ಳಿ. ಸಹಾಯ ಬೇಕೆಂದರೆ ಕೇಳಿ ಪಡೆಯಿರಿ. ನೆನಪಿರಲಿ, ನೀವು ಒಬ್ಬಂಟಿಯಲ್ಲ. ನಾವೂ ಇದರಲ್ಲಿ ನಿಮ್ಮ ಜತೆಗೆ ಪಾಲುದಾರರಿದ್ದೇವೆ. ಎಲ್ಲದಕ್ಕಿಂತ ಬಹುಮುಖ್ಯ ಏನೆಂದರೆ ಭರವಸೆ ಕಳೆದುಕೊಳ್ಳದಿರಿ’ ಎಂದು ಚುಟುಕಾದ ಬರಹದ ಮೂಲಕ ಖಿನ್ನತೆಯನ್ನು ಮಣಿಸೋಣ ಎಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net