ಟಿಕ್​ಟಾಕ್​ನಲ್ಲೂ ದೀಪಿಕಾ ಪಡುಕೋಣೆ

Deepika Padukone vvani
Published on
ಈಗಾಗಲೇ ಟ್ವಿಟರ್-ಇನ್​ಸ್ಟಾಗ್ರಾಮ್ಲ್ಲಿ ಮಿಲಿಯನ್​ಗಟ್ಟಲೆ ಫಾಲೋವರ್ಸ್ ಹೊಂದಿರುವ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಇದೀಗ ತಮ್ಮ ಜನ್ಮದಿನವನ್ನು ‘ಸಾಮಾ ಜಿಕ’ವಾಗಿಯೂ ಸ್ಮರಣೀಯ ಆಗಿಸಿಕೊಂಡಿದ್ದಾರೆ. ಅಂದರೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ಹುಟ್ಟಿದ ದಿನದ ಸಂಭ್ರಮದಲ್ಲೇ ಟಿಕ್​ಟಾಕ್​ಗೆ ಪ್ರವೇಶಿಸುವ ಮೂಲಕ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳೂ ವಿಶೇಷವಾಗಿ ಸ್ಪಂದಿಸಿದ್ದು, ದೀಪಿಕಾ ಟಿಕ್​ಟಾಕ್​ನಲ್ಲಿ ಖಾತೆ ತೆರೆದ 12 ಗಂಟೆಗಳಲ್ಲೇ 1.2 ಮಿಲಿಯನ್​ಗೂ ಅಧಿಕ ಫಾಲೋವರ್ಸ್ ಪಡೆದಿದ್ದಾರೆ.

ಇದೇ ಶುಕ್ರವಾರ ಬಿಡುಗಡೆ ಆಗಲಿರುವ ಅವರ ಬಹುನಿರೀಕ್ಷಿತ ಸಿನಿಮಾ ಚಪಾಕ್​ನ ಪ್ರಚಾರಾರ್ಥ ಕಾರ್ಯಕ್ರಮಗಳಲ್ಲಿ ಸದ್ಯ ಬಿಜಿಯಾಗಿರುವ ದೀಪಿಕಾ, ಅದಕ್ಕೆ ಈ ಹೊಸ ಖಾತೆಯನ್ನೂ ವೇದಿಕೆ ಮಾಡಿಕೊಂಡಿದ್ದಾರೆ. ಡ್ಯಾನ್ಸ್, ರ್ಯಾಪ್ ಸೇರಿ ಹಲವು ವಿಡಿಯೋಗಳನ್ನು ಟಿಕ್​ಟಾಕ್​ನಲ್ಲಿ ಹಂಚಿಕೊಂಡು ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಪಡೆಯುತ್ತಿದ್ದಾರೆ. ದೀಪಿಕಾ ಪೋಸ್ಟ್ ಮಾಡಿದ ಮೊದಲ ಆರು ವಿಡಿಯೋಗಳು 50 ದಶಲಕ್ಷ ವೀಕ್ಷಣೆ ಕಂಡರೆ, ಮೂರು ವಿಡಿಯೋಗಳು ಪ್ರತ್ಯೇಕವಾಗಿ 12 ದಶಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿವೆ.

‘ನಾನೊಂಥರ ಡಿಫರೆಂಟ್. ನನ್ನಲ್ಲಿ ಮುಗ್ಧತೆ-ಹುಡುಗುತನ ಎರಡೂ ಇವೆ. ಅದು ನನ್ನೊಂದಿಗೆ ಆತ್ಮೀಯತೆ ಇರುವವರಿಗೆ ಮಾತ್ರ ಗೊತ್ತು. ಈಗ ಟಿಕ್​ಟಾಕ್ ಮೂಲಕ ಅಭಿಮಾನಿಗಳೊಂದಿಗೆ ನನ್ನ ವ್ಯಕ್ತಿತ್ವ ಹಂಚಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ದೀಪಿಕಾ. ಈಗಾಗಲೇ ಟಿಕ್​ಟಾಕ್​ನಲ್ಲಿ ಸಕ್ರಿಯರಾಗಿರುವ ಬಾಲಿವುಡ್ ಸೆಲೆಬ್ರಿಟಿಗಳಾದ ಶಿಲ್ಪಾ ಶೆಟ್ಟಿ ಕುಂದ್ರಾ, ಮಾಧುರಿ ದೀಕ್ಷಿತ್, ರಿತೇಶ್ ದೇಶಮುಖ್, ಸಿದ್ಧಾರ್ಥ್ ಮಲ್ಹೋತ್ರಾ, ಜಾಕ್ವೆಲಿನ್ ಫರ್ನಾಂಡಿಸ್ ಅವರ ಸಾಲಿಗೆ ದೀಪಿಕಾ ಹೊಸ ಸೇರ್ಪಡೆ ಎನಿಸಿಕೊಂಡಿದ್ದಾರೆ. ಟಿಕ್​ಟಾಕ್​ನಿಂದ ದೀಪಿಕಾ ಮಾತ್ರವಲ್ಲದೆ ಅವರ ಅಭಿಮಾನಿಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net