

ಬೆಂಗಳೂರು: ‘ನಾಗಿಣಿ’ ಧಾರಾವಾಹಿ ಖ್ಯಾತಿಯ ನಟಿ ದೀಪಿಕಾ ದಾಸ್, ಬಳಿಕ ರಿಯಾಲಿಟಿ ಶೋ ಬಿಗ್‌ಬಾಸ್ 7 ಹಾಗೂ 9ರ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದ ದೀಪಿಕಾ, ಮತ್ತೆ ಬಣ್ಣದ ಲೋಕಕ್ಕೆ ರೀ-ಎಂಟ್ರಿಯಾಗಿದ್ದಾರೆ. ರೋಹಿತ್ ಕೀರ್ತಿ ನಿರ್ದೇಶನದ "ಪಾರು ಪಾರ್ವತಿ’ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಅವರು ತಮ್ಮ ಪಾತ್ರ ಹಾಗೂ ಸಿನಿ ಜರ್ನಿಯ ಬಗ್ಗೆ ‘ವಿಜಯವಾಣಿ’ ಜತೆ ಖುಷಿಹಂಚಿಕೊಂಡರು. ‘ಈ ಚಿತ್ರದಲ್ಲಿ ಪಾಯಲ್ ಎಂಬ ಪಾತ್ರ. ಹುಡುಗಿಯೊಬ್ಬಳು ತನ್ನನ್ನು ತಾನು ಕಂಡುಕೊಳ್ಳಲು ಸೋಲೊ ಟ್ರಿಪ್ ಹೋಗುವ ಕಥೆ. ಈ ನಡುವೆ, ಎಲ್ಲವೂ ಅನುಭವಕ್ಕೆ ಬರುತ್ತದೆ. ಪ್ರೀತಿ, ಬಾಂಧವ್ಯದ ಅರ್ಥ ಗೊತ್ತಾಗುತ್ತದೆ. ಹಾಗೇ ಕಷ್ಟ-ನಷ್ಟಗಳೂ ಆಗುತ್ತವೆ. ಈ ಸವಾಲುಗಳನ್ನು ಆಕೆ ಹೇಗೆ ಎದುರಿಸುತ್ತಾಳೆ ಎಂಬುದು ಕಥೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ.
ತಿಂಗಳಲ್ಲಿ ಹತ್ತು ಕೆಜಿ ಇಳಿಕೆ: ಈ ಚಿತ್ರಕ್ಕಾಗಿ ಹಲವು ರೀತಿಯ ಸವಾಲುಗಳನ್ನು ಎದುರಿಸಿರುವ ದೀಪಿಕಾ ಜಿಮ್‌ನಲ್ಲೂ ಬೆವರು ಹರಿಸಿದ್ದಾರೆ. ‘ಈ ಸಿನಿಮಾ ಒಪ್ಪಿಕೊಂಡಾಗ ನಾನು ದಪ್ಪ ಇದ್ದೆ. ನಿರ್ದೇಶಕರು, ನೀವೇ ಹಿರೋಯಿನ್ ಎಂದು ನಿರ್ಧರಿಸಿದ್ದೇವೆ. ಆದಷ್ಟು ಬೇಗ ಸಿದ್ಧತೆ ನಡೆಸಿ ಎಂದರು. ಬಳಿಕ ನಾನು ತಿಂಗಳಲ್ಲಿ ಹತ್ತು ಕೆಜಿ ತೂಕ ಇಳಿಸಿದೆ. ಕೂದಲು ಕಟ್ ಮಾಡಿಕೊಂಡು ಶಾರ್ಟ್ ಹೇರ್ ಮಾಡಿಸಿದೆ. ಇನ್ನು, ಬೆಂಗಳೂರಿನಿಂದ ಉತ್ತರಾಖಂಡದವರೆಗೆ ಬೈಕ್‌ನಲ್ಲಿಯೇ ಶೂಟಿಂಗ್ ಮಾಡಿದ್ದು, ಉತ್ತರಾಖಂಡದ ಗಿರಿ-ಶಿಖರಗಳ ತಿರುವಿನಲ್ಲಿ ಬೈಕ್ ಓಡಿಸುವುದು ಭಯಾನಕ ಅನುಭವ. ಅಲ್ಲಿ ಒಂದೆರೆಡು ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದು ಇದೆ’ ಎನ್ನುತ್ತಾರೆ.
ಭಾರತ ದರ್ಶನ: "ಪಾರು ಪಾರ್ವತಿ’ ಪ್ರಯಾಣದಲ್ಲಿ ದೀಪಿಕಾ ಹಲವಾರು ರಾಜ್ಯಗಳಲ್ಲಿ ಶೂಟಿಂಗ್ ನಡೆಸಿದ್ದಾರೆ. ಈ ಅನುಭವದ ಬಗ್ಗೆ ‘ ಶೂಟಿಂಗ್‌ಗಾಗಿ ಗೋವಾ, ಮಹಾರಾಷ್ಟ್ರ, ಉತ್ತರಾಖಂಡ ಸೇರಿ ಹಲವು ರಾಜ್ಯಗಳನ್ನು ಸುತ್ತಿದ್ದೇವೆ. ಅಲ್ಲಿನ ಜನರ ಜೀವನ, ಸಂಸ್ಕೃತಿ- ಆಹಾರ ಹೀಗೆ ನಾನಾ ರೀತಿಯ ಅನುಭವವಾಗಿದೆ. ಈ ಚಿತ್ರದ ಮೂಲಕ ಭಾರತ ದರ್ಶನ ಆಯಿತು’ ಎನ್ನುತ್ತಾರೆ. ಇದರ ಜತೆಗೆ ದೀಪಿಕಾ ಮತ್ತೊಂದು ಹೊಸ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ.