ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ: ಬಿಗ್​ಬಾಸ್​ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟ ದೀಪಿಕಾ ದಾಸ್​

Deepika
Published on

ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ಕಿರುತೆರೆ ನಟಿ ಹಾಗೂ ಕಳೆದ ಆವೃತ್ತಿಯ ಬಿಗ್​ಬಾಸ್​ ಸ್ಪರ್ಧಿ ದೀಪಿಕಾ ದಾಸ್​, ರವಿ ಬೆಳಗೆರೆಯೊಂದಿಗೆ ಬಿಗ್​ಬಾಸ್​ನಲ್ಲಿ ಕಳೆದ ಕ್ಷಣಗಳನ್ನು ನೆನೆದು ಭಾವುಕರಾದರು.

ರವಿ ಬೆಳಗೆರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಕಣ್ಣಿರು ಸುರಿಸುತ್ತಲೇ ಮಾಧ್ಯಮಗಳೊಂದಿಗೆ ಮಾತನಾಡಿದ ದೀಪಿಕಾ, ಬಿಗ್​ಬಾಸ್​ನಲ್ಲಿ ನಾವೆಲ್ಲ ಒಟ್ಟಾಗಿದ್ದೆವು. ಒಂದು ವಾರವಷ್ಟೇ ಅವರೊಟ್ಟಿಗೆ ಸಮಯ ಕಳೆದೆವು ಎಂದರು.

ಕೆಲ ಜನರು ಹೇಳೋ ರವಿ ಬೆಳೆಗೆರೆನೆ ಬೇರೆ. ನಮ್ಮ ಜತೆ ಇದ್ದ ರವಿ ಬೆಳಗೆರೆನೇ ಬೇರೆ. ಕೆಲ ಜನರು ಅವರನ್ನ ತುಂಬಾ ಕ್ರೂರಿ ತರ ನೋಡುತ್ತಿದ್ದರು. ಆದರೆ, ಬಿಗ್​ಬಾಸ್ ಮನೆಯಲ್ಲಿ ತುಂಬಾ ಮುಗ್ಧರಂತಿದ್ದರು. ನಿಜಕ್ಕೂ ಇವತ್ತು ಅವರಿಲ್ಲ ಅಂದ್ರೆ ನಮಗೆ ತುಂಬಾ ನೋವಾಗುತ್ತೆ ಎಂದು ದೀಪಿಕಾ ಕಣ್ಣೀರಾಕಿದರು.

ಇನ್ನು ಕಳೆದ ಬಿಗ್​ಬಾಸ್​ ಆವೃತ್ತಿಯಲ್ಲಿ ರವಿ ಬೆಳಗೆರೆ ಅವರು ಒಂದು ವಾರಗಳ ಕಾಲ ಬಿಗ್​ಬಾಸ್​ ಮನೆಯಲ್ಲಿದ್ದರು. ಸ್ಪರ್ಧಿಯಾಗಿ ಇರದೇ ಅತಿಥಿಯಾಗಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ರವಿ ಬೆಳಗೆರೆ ಅವರು ತುಂಬಾ ಲವಲವಿಕೆಯಿಂದ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು. ಅವರು ಬಿಗ್​ಬಾಸ್​ ಮನೆಯಲ್ಲಿದ್ದಷ್ಟು ಕಾಲ ಮನರಂಜನೆಗೂ ಕೊರತೆ ಇರಲಿಲ್ಲ. ಅಲ್ಲದೆ, ಅನೇಕ ಸ್ವಾರಸ್ಯಕರ ಕತೆಗಳನ್ನು ಜನರ ಮುಂದಿಡುತ್ತಿದ್ದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net