

ಬೆಂಗಳೂರು: ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಮಿಂಚಿದ್ದ ನಟಿ ದೀಪಿಕಾ ಆರಾಧ್ಯ ‘ಸಪ್ಲೈಯರ್ ಶಂಕರ’ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದರು. ಇದೀಗ, ಅವರು ‘ಅಮರ ಪ್ರೇಮಿ ಅರುಣ್’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಬಳ್ಳಾರಿ ಹಿನ್ನೆಲೆಯ ಪ್ರೇಮಕಥೆಗೆ ಪ್ರವೀಣ್ ಕುಮಾರ್ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ನಾಯಕ ಹರಿಶರ್ವಾಗೆ ದೀಪಿಕಾ ಜೋಡಿಯಾಗಿದ್ದಾರೆ. ಸಿನಿಮಾ ಇದೇ ತಿಂಗಳ 25ರಂದು ರಿಲೀಸ್ ಆಗಲಿದ್ದು, ದೀಪಿಕಾ ‘ಸೋಶಿಯಲ್ ಮೀಡಿಯಾದಲ್ಲಿ ನನ್ನ ಫೋಟೋಗಳನ್ನು ನೋಡಿದ್ದ ನಿರ್ದೇಶಕರು, ಈ ಕಥೆಗೆ ನಾನೇ ಹೀರೋಯಿನ್ ಆಗಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಜಾಲತಾಣದಲ್ಲಿ ನನಗೆ ಮೆಸೇಜ್ ಮಾಡಿದ್ದಾರೆ. ಆದರೆ, ನಾನು ಅಷ್ಟು ಗಮನಹರಿಸಿರಲಿಲ್ಲ. ಆಗ ಅವರು, ಕಾಸ್ಟಿಂಗ್ ಡೈರೆಕ್ಟರ್ ಮೂಲಕ ನನ್ನನ್ನು ಸಂಪರ್ಕಿಸಿದರು. ನಾನು ಕೂಡ ಕಥೆ ಕೇಳಿದೆ, ಇಷ್ಟವಾಯಿತು. ನನ್ನನ್ನೇ ಹುಡುಕಿಕೊಂಡು ಬಂದ ಅವಕಾಶ ಅಂತ ಒಪ್ಪಿಕೊಂಡೆ. ಬಳ್ಳಾರಿ ಭಾಗದಲ್ಲಿ ನಡೆಯುವಂತಹ ಪ್ರೇಮಕಥೆ ಇದು. ನನ್ನದು ತನ್ನಿಷ್ಟದಂತೆ ಬದುಕುವ ಕಾವ್ಯಾ ಎಂಬ ಹುಡುಗಿಯ ಪಾತ್ರ. ಆದರೆ, ಕುಟುಂಬದ ವಿಚಾರಕ್ಕೆ ಬಂದರೆ ಆಕೆಗೆ ಒಂದಷ್ಟು ಗೊಂದಲ. ಸ್‌ಟಾ ಹಾಗೂ ಸಿಂಪಲ್ ಪಾತ್ರವಾದರೂ ಮ್ಯಾನರಿಸಂ, ಡ್ರೆಸ್ ಪಕ್ಕಾ ದೇಸೀ ಲುಕ್‌ನಲ್ಲಿ ಗಮನಸೆಳೆಯುತ್ತದೆ’ ಎನ್ನುತ್ತಾರೆ.
ಬಳ್ಳಾರಿ ಭಾಷೆ ಕಲಿತೆ: ‘ಅಮರ ಪ್ರೇಮಿ ಅರುಣ್’ ಸಂಪೂರ್ಣ ಬಳ್ಳಾರಿ ಭಾಗದ ಕಥೆ. ಹೀಗಾಗಿಯೇ ಬೆಂಗಳೂರು ಮೂಲದ ದೀಪಿಕಾ ಪಾತ್ರಕ್ಕೆ ಹಲವು ರೀತಿಯ ಸರ್ಕಸ್ ಮಾಡಿದ್ದಾರಂತೆ. ‘ಈ ಚಿತ್ರಕ್ಕಾಗಿ ನಾನು ಬಳ್ಳಾರಿ ಶೈಲಿಯ ಕನ್ನಡ ಕಲಿತೆ. ಅದಕ್ಕಾಗಿ ಕೆಲ ದಿನಗಳ ಕಾಲ ವರ್ಕ್‌ಶಾಪ್ ಮಾಡಿದೆ. ಇನ್ನು ಆ ಭಾಗದ ಮಹಿಳೆಯರು ತುಂಬಾ ಗಟ್ಟಿ. ಅವರಂತೆಯೇ ನಾನು ಇರಬೇಕಿತ್ತು. ಅದಕ್ಕಾಗಿ ಹಳ್ಳಿಗಳಿಗೆ ತೆರಳಿ, ಅಲ್ಲಿನ ಮಹಿಳೆಯರ ಚಲನವಲನಗಳನ್ನು ಗಮನಿಸಿದೆ. ಹಳ್ಳಿಯಲ್ಲಿ ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಶೂಟಿಂಗ್ ಸ್ಥಳಕ್ಕೆ ಬಂದು ಪ್ರೀತಿಯಿಂದ ಮಾತನಾಡಿಸಿ, ಮನೆಗಳಿಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದರು’ ಎಂದು ಶೂಟಿಂಗ್ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಸದ್ಯ ‘ಅಮರ ಪ್ರೇಮಿ ಅರುಣ್’ ಬಿಡುಗಡೆಗೆ ಎದುರುನೋಡುತ್ತಿರುವ ದೀಪಿಕಾ, ಈ ಮಧ್ಯೆ ಎರಡು ಸ್ಕ್ರಿಪ್ಟ್ ಕೇಳಿದ್ದು, ಒಂದನ್ನು ಒಪ್ಪಿಕೊಂಡಿದ್ದಾರಂತೆ.