ಬಾಲಿವುಡ್​ಗೆ ದೀಪಾವಳಿ ಹೊಳಪು; ಮತ್ತೆ ಹಳೆಯ ಲಯದತ್ತ ಚಿತ್ರರಂಗ..

Cinivani lead
Published on

ಚಿತ್ರಮಂದಿರಗಳಲ್ಲಿ ಹೌಸ್​ಫುಲ್ ಬೋರ್ಡ್ ಕಾಣಿಸಿಕೊಂಡು ಎರಡು ವರ್ಷಗಳೇ ಆಗಿತ್ತು. ಇತ್ತ ನೂರು ಕೋಟಿ, ಇನ್ನೂರು ಕೋಟಿ ಎಂಬ ಮಾತಂತೂ ದೂರವೇ ಉಳಿದಿತ್ತು. ಆದರೆ, ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ. ದೇಶದೆಲ್ಲೆಡೆ ಕೋವಿಡ್ ಸಾಂಕ್ರಾಮಿಕ ಇಳಿಕೆಯಾದ ಬೆನ್ನಲ್ಲೇ ಜನ ಮತ್ತೆ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಾರೆ. ಭಾರತೀಯ ಚಿತ್ರರಂಗ ಕ್ರಮೇಣ ಹಳೆಯ ಲಯಕ್ಕೆ ಮರಳುತ್ತಿದೆ. ಪ್ರೇಕ್ಷಕ ಚಿತ್ರಮಂದಿರಕ್ಕೆ ಬರುತ್ತಾನೋ, ಇಲ್ಲವೋ ಎಂಬ ಭಯ ನಿರ್ದೇಶಕ, ನಿರ್ವಪಕರಲ್ಲಿತ್ತು. ಆ ಭಯವನ್ನು ಅಕ್ಷಯ್ ಕುಮಾರ್ ತೊಡೆದುಹಾಕಿದ್ದಾರೆ. ಇತ್ತೀಚೆಗಷ್ಟೇ ತೆರೆಕಂಡ ಅವರ ‘ಸೂರ್ಯವಂಶಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಹಾಗೆ ನೋಡಿದರೆ, ವಿಜಯ್ ಅಭಿನಯದ ತಮಿಳು ಚಿತ್ರ ‘ಮಾಸ್ಟರ್’, ಶೇ. 50ರಷ್ಟು ಹಾಜರಾತಿಯ ನಡುವೆಯೇ 100 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿತ್ತು. ಬೇರೆಬೇರೆ ಭಾಷೆಗಳ ಚಿತ್ರರಂಗಗಳಿಗೆ ಹೋಲಿಸಿದರೆ, ಬಾಲಿವುಡ್​ನಲ್ಲಿ ಸ್ಟಾರ್​ಗಳ ಸರಣಿ ಸಿನಿಮಾಗಳು ಸಿದ್ಧವಾಗಿ, ತೆರೆಗೆ ರೆಡಿಯಾಗಿದ್ದವು. ಆದರೆ, ಯಾರೊಬ್ಬರೂ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿರಲಿಲ್ಲ. ಹೀಗಿರುವಾಗ ಮೊದಲು ಧೈರ್ಯ ತೋರಿಸಿ, ‘ಬೆಲ್ ಬಾಟಂ’ ಚಿತ್ರವನ್ನು ಬಿಡುಗಡೆ ಮಾಡಿದವರು ಅಕ್ಷಯ್ ಕುಮಾರ್. ಆದರೆ, ಜನ ಬರದೇ ಇದ್ದ ಕಾರಣ, ಚಿತ್ರದ ಕಲೆಕ್ಷನ್ 100 ಕೋಟಿ ಕ್ಲಬ್ ಇರಲಿ, 10 ಕೋಟಿ ಕ್ಲಬ್ ಸೇರುವುದು ಸಹ ಕಷ್ಟವಾಗಿತ್ತು.

ಕಾದು ನೋಡುವ ತಂತ್ರ: ಬಾಲಿವುಡ್​ನಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ಸಿಗುತ್ತಿದ್ದಂತೆ ಬಹಳಷ್ಟು ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆಯಾಯಿತು. ಆದರೆ, ಜನರನ್ನು ಸೆಳೆಯುವುದಕ್ಕೆ ಒಂದು ದೊಡ್ಡ ಕಮರ್ಷಿಯಲ್ ಚಿತ್ರ ಬೇಕಾಗಿತ್ತು. ಒಂದೋ ಸಲ್ಮಾನ್, ಇಲ್ಲ ಅಕ್ಷಯ್ ಕುಮಾರ್ ... ಇಬ್ಬರಲ್ಲಿ ಒಬ್ಬರಿಂದ ಮಾತ್ರ ಜನರನ್ನು ಕರೆದುಕೊಂಡು ಬರುವುದಕ್ಕೆ ಸರೀ ಎಂದು ಬಾಲಿವುಡ್ ತೀರ್ವನಿಸಿತ್ತು. ಇಂತಹ ಸಂದರ್ಭದಲ್ಲಿ ಮೊದಲು ಹೆಜ್ಜೆ ಇಟ್ಟಿದ್ದು ಅಕ್ಷಯ್ ಕುಮಾರ್. ಅವರ ಮೇಲೆ ಬಾಲಿವುಡ್ ಇಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ. ನಿರೀಕ್ಷೆಯಂತೆಯೇ ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ. ಇಲ್ಲಿಯವರೆಗೂ 100 ಕೋಟಿ ಕ್ಲಬ್ ವಿಚಾರದಲ್ಲಿ ದಾಖಲೆ ಮಾಡಿದವರು ಸಲ್ಮಾನ್ ಖಾನ್. ಸತತವಾಗಿ ಅವರ 15 ಚಿತ್ರಗಳು ನೂರು ಪ್ಲಸ್ ಕೋಟಿ ಗಳಿಸಿವೆ. ಇದೀಗ ಆ ದಾಖಲೆಯನ್ನು ಅಕ್ಷಯ್ ಸರಿಗಟ್ಟಿದ್ದಾರೆ.

ರಜನಿ ಮೇನಿಯಾ ಮತ್ತೆ ಶುರು: ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ’ ಚಿತ್ರವು ‘ಸೂರ್ಯವಂಶಿ’ಗಿಂತ ಎರಡರಷ್ಟು ಕಲೆಕ್ಷನ್ ಮಾಡಿದೆ. ಚಿತ್ರದ ಬಗ್ಗೆ ಅಷ್ಟೇನೂ ಒಳ್ಳೆಯ ಪ್ರತಿಕ್ರಿಯೆ ಇಲ್ಲ. ಇದೊಂದು ಸಾಧಾರಣ ಚಿತ್ರ ಎಂಬ ಅಭಿಪ್ರಾಯ ಕೇಳಿಬಂದರೂ, ರಜನಿಕಾಂತ್ ಅವರನ್ನು ನೋಡುವುದಕ್ಕೆ ಜನ ಮುಗಿಬೀಳುತ್ತಿದ್ದಾರೆ. ಹಾಗಾಗಿಯೇ, ಐದು ದಿನಗಳಲ್ಲಿ ಕಲೆಕ್ಷನ್ 200 ಕೋಟಿ ದಾಟಿದೆಯಂತೆ.

ಮುಂದೈತೆ ಊರಹಬ್ಬ: ‘ಸೂರ್ಯವಂಶಿ’ ಮತ್ತು ‘ಅಣ್ಣಾತ್ತೆ’ ಚಿತ್ರಗಳಿಗೆ ಸಿಕ್ಕ ಪ್ರತಿಕ್ರಿಯೆಯಿಂದ ಇಡೀ ಭಾರತೀಯ ಚಿತ್ರರಂಗವೇ ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ‘ಪುಷ್ಪ’, ‘ಆರ್​ಆರ್​ಆರ್’, ‘ಗಂಗೂಬಾಯಿ ಕಥೈವಾಡಿ’, ‘ರಾಧೆ ಶ್ಯಾಮ್, ‘ವಿಕ್ರಾಂತ್ ರೋಣ’, ‘777 ಚಾರ್ಲಿ’ ಮುಂತಾದ ದೊಡ್ಡ ಚಿತ್ರಗಳಿದ್ದು, ಈ ಚಿತ್ರಗಳಿಗೂ ಜನ ಇದೇ ರೀತಿ ಪ್ರೋತ್ಸಾಹಿಸುತ್ತಾರೆ, ಚಿತ್ರರಂಗ ಮತ್ತೊಮ್ಮೆ ಹಳೆಯ ಭವ್ಯ ದಿನಗಳನ್ನು ಕಾಣಲಿದೆ ಎಂಬ ನಂಬಿಕೆ ಚಿಗುರೊಡೆದಿದೆ. ಆ ನಂಬಿಕೆ ಸುಳ್ಳಾಗದಿದ್ದರೆ ಸಾಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net