

ಬೆಂಗಳೂರು: ನಿರ್ದೇಶಕ ದೀಪಕ್ ಮಧುವನಹಳ್ಳಿ ಡಬಲ್ ಖುಷಿಯಲ್ಲಿದ್ದಾರೆ. ಅವರ ನಿರ್ದೇಶನದ ಎರಡು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಎರಡು ವಾರಗಳಲ್ಲಿ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 7ರಂದು ‘ಅನ್‌ಲಾಕ್ ರಾಘವ’ ರಿಲೀಸ್ ಆಗಿತ್ತು, ಅದರ ಬೆನ್ನಲ್ಲೇ 14ರಂದು ‘ರಾಜು ಜೇಮ್ಸ್ ಬಾಂಡ್’ ಸಿನಿಮಾ ತೆರೆಕಂಡಿದೆ. ‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್, ಮೃದುಲಾ ಪಟ್ಟಣಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಸದ್ಯ ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ದೀಪಕ್, ‘‘ರಾಜು ಜೇಮ್ಸ್ ಬಾಂಡ್’ ಡಾರ್ಕ್ ಕಾಮಿಡಿ ಸಿನಿಮಾ. ಸಮಾಜದಲ್ಲಿ ನಗುವಿನ ಪ್ರಾಮುಖ್ಯ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಜನರನ್ನು ನಗಿಸುತ್ತಲೇ ಒಂದು ಹೊಸ ವಿಚಾರ ಹೇಳುವ ಪ್ರಯತ್ನ ಮಾಡಲಾಗಿದೆ. ನಗುವಿನಿಂದಲೇ ಕಥೆ ಆರಂಭವಾಗುತ್ತದೆ. ಮಧ್ಯಂತರದ ಹದಿನೈದು ನಿಮಿಷ ಮುಂಚೆ ಬ್ಯಾಂಕ್ ದರೋಡೆಯ ದೃಶ್ಯವಿದೆ. ಅಲ್ಲಿ ಕಥೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಈ ವೇಳೆ ಜನ ರೆಸ್ಪಾನ್ಸ್ ಹೇಗಿರುತ್ತದೆ ಎಂಬ ಭಯವಿತ್ತು. ಆದರೆ, ಅಷ್ಟೇ ಕುತೂಹಲದಿಂದ ಪ್ರೇಕ್ಷಕರು ಸಿನಿಮಾ ವೀಕ್ಷಿಸುತ್ತಿರುವುದನ್ನು ಕಂಡು ಖುಷಿಯಾಯಿತು. ಚಿತ್ರದಲ್ಲಿ ಎಲ್ಲ ಅಂಶಗಳು ಚೆನ್ನಾಗಿ ಮೂಡಿಬಂದಿದ್ದು, ಕುಟುಂಬ ಸಮೇತರಾಗಿ ನಮ್ಮ ಸಿನಿಮಾ ಬಂದು ನೋಡಬಹುದು’ ಎನ್ನುತ್ತಾರೆ.
ಥಿಯೇಟರ್ ಅನುಭವ ನೀಡುವ ಸಿನಿಮಾ: ‘ರಾಜು ಜೇಮ್ಸ್ ಬಾಂಡ್’ ಸಿನಿಮಾ ವಿಶೇಷತೆ ಬಗ್ಗೆ ದೀಪಕ್, ‘ಹ್ಯೂಮರ್ ಅಂಶಗಳಿರುವ ಈ ಸಿನಿಮಾ ಥಿಯೇಟರ್‌ನಲ್ಲಿ ವಿಶೇಷ ಅನುಭವ ನೀಡಲಿದೆ. ಲಂಡನ್‌ನಲ್ಲಿ ಎರಡು ಸಾಂಗ್ ಶೂಟ್ ಮಾಡಲಾಗಿದ್ದು, ಆ ಲೋಕೇಷನ್ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದರ ಕ್ರೆಡಿಟ್ ಏನಿದ್ದರೂ ನಿರ್ಮಾಪಕರಾದ ಮಂಜುನಾಥ ವಿಶ್ವಕರ್ಮ ಮತ್ತು ಕಿರಣ್ ಭರ್ತೂರ್‌ಗೆ ಸಲ್ಲುತ್ತದೆ’ ಎನ್ನುತ್ತಾರೆ.
ಮೃದುಲಾ ಟೀಚರ್: ‘ರಾಜು ಜೇಮ್ಸ್ ಬಾಂಡ್’ ಚಿತ್ರದಲ್ಲಿ ಗುರುನಂದನ್‌ಗೆ ನಾಯಕಿಯಾಗಿರುವ ಮೃದುಲಾ ಪಟ್ಟಣಶೆಟ್ಟಿ ಮೂಲತಃ ಹುಬ್ಬಳ್ಳಿಯವರು. ಇವರ ಒಂದು ರೀಲ್ಸ್ ನೋಡಿ, ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರಂತೆ. ಸಿನಿಮಾ ಜರ್ನಿ ಕುರಿತು ಮೃದುಲಾ, ‘ಇದು ನನ್ನ ಮೊದಲ ಮೂವಿ. ಇಲ್ಲಿ ನಾನು ಟೀಚರ್ ಪಾತ್ರ ಮಾಡಿದ್ದೇನೆ. ಮಕ್ಕಳಿಗೆ ಪಾಠ ಮಾಡುವ ಜತೆಗೆ ರಾಜುಗೂ ಒಳ್ಳೆಯ ಪಾಠ ಮಾಡಿದ್ದೇನೆ. ನಮ್ಮ ತಾಯಿ ಟೀಚರ್. ಹಾಗಾಗಿ ಅವರನ್ನು ನೋಡಿಕೊಂಡು ಬೆಳೆದಿರುವುದರಿಂದ ನನಗೆ ಈ ಪಾತ್ರ ಸುಲಭ ಎನಿಸಿತು. ಸಿನಿಮಾದಲ್ಲಿ ಮನರಂಜನೆ ಹೇರಳವಾಗಿದೆ. ಒತ್ತಡದ ನಡುವೆ ಜನರಿಗೆ ಒಂದೆರೆಡು ತಾಸು ಆರಾಮಾಗಿ ನಗಬೇಕು ಎಂದರೆ ನಮ್ಮ ಸಿನಿಮಾ ನೋಡಬೇಕು’ ಎಂದು ಹೇಳಿಕೊಳ್ಳುತ್ತಾರೆ.