

ಬೆಂಗಳೂರು: ರೇಣುಕಾಸ್ವಾಮಿ ಎಂಬಾತನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರನ್ನು ವಶಕ್ಕೆ ಪಡೆದಿರುವ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಕೊಲೆ ಆರೋಪಿಗಳು ತನಿಖೆ ವೇಳೆ ನಟ ದರ್ಶನ್ ಬಗ್ಗೆ ಬಾಯಿಬಿಟ್ಟಿದ್ದಾರೆ. ದರ್ಶನ್ ಸಮ್ಮುಖದಲ್ಲೇ ಕೊಲೆ ಮಾಡಿರುವ ಶಂಕೆ ಇದೆ. ಅಲ್ಲದೆ, ಕೊಲೆಯಲ್ಲಿ ನಟ ದರ್ಶನ್ ಕೂಡ ಭಾಗಿ ಆಗಿರುವ ಅನುಮಾನ ವ್ಯಕ್ತವಾಗಿದೆ. ಇಂದು ಮುಂಜಾನೆಯಷ್ಟೇ ದರ್ಶನ್ರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಮಾಡ್ತಾ ಇದೀವಿ. ಸದ್ಯ ದರ್ಶನ್ರನ್ನು ನಗರಕ್ಕೆ ಕರೆತರುತ್ತಿದ್ದು ತನಿಖೆ ಮುಂದುವರೆದಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದರು.
ಕೊಲೆಯಾದ ರೇಣುಕಾಸ್ವಾಮಿಯ ಮುಖ, ತಲೆ ಹಾಗೂ ಕಿವಿಯಲ್ಲಿ ರಕ್ತಗಾಯವಾಗಿರೋದು ಕಂಡು ಬಂದಿರುತ್ತದೆ. ಯಾರೋ ಕೊಲೆ ಮಾಡಿ ತಂದು ಬಿಸಾಡಿರುವ ಅನುಮಾನ ಅಂತ ದೂರು ದಾಖಲಿಸಲಾಗಿತ್ತು. ಜೂನ್ 8ರಂದು ಬೇರೆಡೆ ಕೊಲೆ ಮಾಡಲಾಗಿದೆ. ಜೂನ್ 9ರಂದು ಮೃತದೇಹ ಸಿಕ್ಕಿದೆ. ಬಳಿಕ ಮಾಹಿತಿ ಆಧರಿಸಿ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಡಿಸಿಪಿ ಗಿರೀಶ್ ಹೇಳಿದರು.
ಅಂದಹಾಗೆ ಪವಿತ್ರಾ ಗೌಡ ವಿಚಾರಕ್ಕೆ ನಟ ದರ್ಶನ್ ಬಂಧನವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯ ಶೆಡ್ ಒಂದರಲ್ಲಿ ಜೂನ್ 9ರಂದು ರೇಣುಕಾಸ್ವಾಮಿಯ ಕೊಲೆ ನಡೆದಿತ್ತು. ಈ ಪ್ರಕರಣದಲ್ಲಿ ಕೆಲ ಆರೋಪಿಗಳನ್ನು ಕಾಮಾಕ್ಷಿ ಪಾಳ್ಯ ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿಗಳು ದರ್ಶನ್ ಹೆಸರನ್ನು ಬಹಿರಂಗಪಡಿಸಿದ್ದಾರೆ. ದರ್ಶನ್ ಸೂಚನೆ ಕೊಟ್ಟಿದ್ದಕ್ಕೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ.
ಇಂದು ಮುಂಜಾನೆ ಮೈಸೂರಿನ ಫಾರ್ಮ್ ಹೌಸ್ನಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆದಿರುವ ಕಾಮಾಕ್ಷಿ ಠಾಣಾ ಪೊಲೀಸರು, ಮೈಸೂರಿನಿಂದ ಬೆಂಗಳೂರಿಗೆ ದರ್ಶನ್ ಅವರನ್ನು ಕರೆತರುತ್ತಿದ್ದಾರೆ. ಕೊಲೆ ಕೇಸ್ನಲ್ಲಿ ಆರೋಪಿಗಳ ಜೊತೆ ದರ್ಶನ್ ನಿರಂತರ ಸಂಪರ್ಕದಲ್ಲಿರುವ ಶಂಕೆಯು ವ್ಯಕ್ತವಾಗಿದೆ. ಆರೋಪಿಯ ವಿಚಾರಣೆ ವೇಳೆಯೂ ನಟ ದರ್ಶನ್ ಹೆಸರು ಬಾಯಿಬಿಟ್ಟಿದ್ದಾರೆಂದು ತಿಳಿದುಬಂದಿದೆ.