ಕಾಮೇಗೌಡರ ಕುರಿತು ಚಿತ್ರ ಮಾಡ್ತಿದ್ದಾರೆ ದಯಾಳ್​ ...

The Good Shepherd
Published on

ಮೊನ್ನೆಯಷ್ಟೇ 'ಮನ್​ ಕೀ ಬಾತ್​'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ಆಧುನಿಕ ಭಗೀರಥ' ಎಂದೇ ಹೆಸರಾಗಿರುವ ಕಾಮೇಗೌಡ ಅವರ ಕುರಿತು ಮಾತನಾಡಿದ್ದರು. ಗೌಡರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದರು.

ಈಗ ಕಾಮೇಗೌಡರ ಕುರಿತಾಗಿ ದೇಶದೆಲ್ಲೆಡೆ ಸುದ್ದಿಯಾಗುತ್ತಿದೆ. ಈ ಮಧ್ಯೆ, ನಿರ್ದೇಶಕ ದಯಾಳ್​ ಪದ್ಮನಾಭನ್​ ಅವರು ಗೌಡರ ಕುರಿತಾಗಿ 'ದಿ ಗುಡ್​ ಶೆಪರ್ಡ್​​' ಎಂಬ ಸಾಕ್ಷ್ಯಚಿತ್ರ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಒಬ್ಬ ಸಾಮಾನ್ಯ ಕುರಿಗಾಹಿಯು, ಅಷ್ಟೊಂದು ಕೆರೆಗಳನ್ನು ಕಟ್ಟಿದ್ದು ಹೇಗೆ ಮತ್ತು ಅದರ ಹಿಂದೆ ಅವರ ಶ್ರಮವನ್ನು ಈ ಡಾಕ್ಯುಮೆಂಟರಿಯಲ್ಲಿ ವಿವರಿಸುವುದಕ್ಕೆ ಸಜ್ಜಾಗಿದ್ದಾರೆ.

ಈ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿದ ಅವರು, 'ಕಳೆದ 15 ದಿನಗಳ ಹಿಂದೆ ಅವರ ಬಗ್ಗೆ ವಿಷಯ ಗೊತ್ತಾಯಿತು. ಅಷ್ಟೊಂದು ಸಾಧನೆ ಮಾಡಿದ್ದರೂ, ಅವರು ತೆರೆಮರೆಯ ಕಾಯಿಯಾಗಿ ಉಳಿದಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಿಟ್ಟರೆ ಬೇರೆ ದೊಡ್ಡ ಪ್ರಶಸ್ತಿ ಬಂದಿಲ್ಲ. ಅವರ ಸಾಧನೆ ಹೆಚ್ಚು ಜನರಿಗೆ ಗೊತ್ತಿಲ್ಲ. ಯಾಕೆ ಅವರ ಕುರಿತಾಗಿ ಒಂದು ಸಾಕ್ಷ್ಯ ಚಿತ್ರ ಮಾಡಿ, ಅದನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡಬಾರದು ಎಂದನಿಸಿತು. ಅದರಿಂದ ಅವರನ್ನು ನಾಲ್ಕು ಜನ ಗುರುತಿಸಿದಂತಾಗುತ್ತದೆ' ಎನ್ನುತ್ತಾರೆ ದಯಾಳ್​.

ಈಗಾಗಲೇ ದಯಾಳ್​, ಕಾಮೇಗೌಡರ ಜತೆಗೆ ಮಾತನಾಡಿ, ಸಾಕ್ಷ್ಯಚಿತ್ರ ಮಾಡುವ ಬಗ್ಗೆ ಹೇಳಿದ್ದಾರಂತೆ. ಇದಕ್ಕೆ ಕಾಮೇಗೌಡ ಸಹ ಸಮ್ಮತಿ ನೀಡಿದ್ದಾರೆ. 'ಜುಲೈ 10ರ ನಂತರ ಕೆಲಸ ಶುರುವಾಗಲಿದೆ. 20 ನಿಮಿಷಗಳ ಈ ಸಾಕ್ಷ್ಯಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿರುತ್ತದೆ. ಈಗಾಗಲೇ ಸ್ಕ್ರಿಪ್ಟ್​ ಬರೆಯುವ ಕೆಲಸ ಶುರುವಾಗಿದೆ' ಎಂದು ಮಾಹಿತಿ ಕೊಡುತ್ತಾರೆ ದಯಾಳ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net