ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ ಟಾಲಿವುಡ್​ಗೆ ಎಂಟ್ರಿ! ಸಿನಿಮಾ ಯಾವುದು? ಯಾರು ಹೀರೋ? David Warner

David Warner
Published on

David Warner : ಆಸ್ಟ್ರೇಲಿಯಾದ ಸ್ಟಾರ್​ ಕ್ರಿಕೆಟಿಗ ಡೇವಿಡ್ ವಾರ್ನರ್​ಗೆ ಭಾರತ ಅಂದ್ರೆ ವಿಶೇಷ ಪ್ರೀತಿ ಎಂದರೆ ತಪ್ಪಾಗಲಾರದು. ಅದರಲ್ಲೂ ಭಾರತೀಯ ಸಿನಿಮಾಗಳೆಂದರೆ ವಾರ್ನರ್​ಗೆ ತುಂಬಾ ಇಷ್ಟ. ಅಲ್ಲು ಅರ್ಜುನ್​ ನಟನೆಯ ಪುಷ್ಪ ಸಿನಿಮಾದ ಡೈಲಾಗ್‌ಗಳಿಂದಲೇ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಸಿನಿಮಾ ಡೈಲಾಗ್‌ಗಳನ್ನು ಬಳಸಿ ರೀಲ್ಸ್​ ಮಾಡುವ ಮೂಲಕ ವಾರ್ನರ್​ ಪ್ರಸಿದ್ಧರಾಗಿದ್ದಾರೆ. ಇದೀಗ ಭಾರತೀಯ ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ವಾರ್ನರ್​ ಸಿದ್ಧರಾಗಿದ್ದಾರೆ. ಯಾವುದು ಆ ಸಿನಿಮಾ ಅನ್ನೋದನ್ನ ನಾವೀಗ ತಿಳಿಯೋಣ.

ನಟ ನಿತಿನ್ ನಟನೆಯ ಹಾಗೂ ವೆಂಕಿ ಕುಡುಮುಲ ನಿರ್ದೇಶನದ ರಾಬಿನ್ ಹುಡ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. 'ಭೀಷ್ಮ'ದಂತಹ ಹಿಟ್ ಚಿತ್ರದ ನಂತರ, ನಿತಿನ್​-ವೆಂಕಿ ಕಾಂಬೊದಿಂದ ಬರುತ್ತಿರುವ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಗಳಿವೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಮಾರ್ಚ್ 28 ರಂದು ಬಿಡುಗಡೆಯಾಗಲಿದೆ.

ಇತ್ತೀಚೆಗೆ ಕಿಂಗ್‌ಸ್ಟನ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಪಕ ವೈ ರವಿಶಂಕರ್, ಚಿತ್ರದ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದರು. ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಚಿತ್ರದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು. ಇದರಿಂದಾಗಿ ನಿತಿನ್ ಹಾಗೂ ವಾರ್ನರ್ ಅಭಿಮಾನಿಗಳು ತುಂಬಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೆ ಡೇವಿಡ್ ವಾರ್ನರ್ ಅವರು ಈ ಹಿಂದೆ ಅಲ್ಲು ಅರ್ಜುನ್ ನಟನೆಯ ಸೂಪರ್​ ಹಿಟ್​ ಪುಷ್ಪ ಚಿತ್ರದ ಡೈಲಾಗ್​ಗಳ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಆಗಾಗ್ಗೆ ಅಲ್ಲು ಅರ್ಜುನ್​ ಡೈಲಾಗ್‌ಗಳನ್ನು ಹೇಳಿ ಪ್ರೇಕ್ಷಕರನ್ನು ತಮ್ಮದೇ ಆದ ಶೈಲಿಯಲ್ಲಿ ನಗಿಸುತ್ತಿದ್ದರು. ಡೇವಿಡ್ ವಾರ್ನರ್ ಈಗ ರಾಬಿನ್ ಹುಡ್ ಚಿತ್ರದ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ಕ್ರಿಕೆಟ್ ಅಭಿಮಾನಿಗಳು ಮತ್ತು ಟಾಲಿವುಡ್ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಡೇವಿಡ್ ವಾರ್ನರ್ ಈ ಹಿಂದೆ ಐಪಿಎಲ್‌ನಲ್ಲಿ ಹೈದರಾಬಾದ್ ಸನ್‌ರೈಸರ್ಸ್ ತಂಡದ ನಾಯಕರಾಗಿ ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net