DASKATH MOVIE REVIEW: ಸಹಿ ಹಿಂದಿನ ಆಕ್ರೋಶ, ಸಿಟ್ಟಿನ ಕಥೆ

daskath
Published on

ಚಿತ್ರ: ದಸ್ಕತ್

ನಿರ್ದೇಶನ: ಅನೀಶ್ ಪೂಜಾರಿ ವೇಣೂರು

ತಾರಾಗಣ: ಯುವ ಶೆಟ್ಟಿ, ದೀಕ್ಷಿತ್ ಕೆ. ಅಂಡಿಂಜೆ, ಮೋಹನ್ ಶೇನಿ, ಭವ್ಯಾ ಪೂಜಾರಿ, ನವೀನ್ ಬೋಂದೆಲ್ ಮತ್ತಿತರರು.

ಶಿವ ಸ್ಥಾವರಮಠ

ಮನುಷ್ಯನ ತಾಳ್ಮೆಗೂ ಒಂದು ಮಿತಿಯಿದೆ. ಅವನೆಷ್ಟೇ ಅಸಹಾಯಕನಾದರೂ ಆತನ ತಾಳ್ಮೆ, ಕೋಪದ ಕಟ್ಟೆ ಒಡೆದರೆ ಅದು ಬೆಂಕಿಯಾಗಿ ಉರಿಯಬಲ್ಲದು. ಇಂತಹ ಅಮಾಯಕ ಜನರ ನೋವಿನ, ಅವಮಾನ ಹಾಗೂ ಸಿಟ್ಟಿನ ಕಥೆಯೇ ‘ದಸ್ಕತ್’.

ಕೇಪುಲಪಲ್ಕೆ ಎಂಬ ಗ್ರಾಮದ ಪಂಚಾಯಿತಿ ಕಚೇರಿಯಲ್ಲಿ ಗುಣಪಾಲನದ್ದೇ (ಯುವ ಶೆಟ್ಟಿ) ಅರ್ಭಟ. ಗ್ರಾ.ಪಂ. ಅಧ್ಯಕ್ಷ ಸೇರಿ ಊರಿನ ಜನ ಆತನ ಕಿರುಕುಳಕ್ಕೆ ಬೇಸತ್ತಿರುತ್ತಾರೆ. ಊರಿನ ನಾಲ್ವರು ಯುವಕರ ಜತೆ ಗುಣಪಾಲ ಗುದ್ದಾಟಕ್ಕೆ ಬೀಳುತ್ತಾನೆ. ಈ ಹೊಡೆದಾಟದಲ್ಲಿ ಒಬ್ಬ ಜೀವ ಕಳೆದುಕೊಂಡರೆ, ಇನ್ನು ಮೂವರ ಮಾನ ಹಾನಿಯಾಗುತ್ತದೆ. ಹಾಗಾದರೆ, ಮುಂದೆ ಆ ಮೂವರು ಏನು ಮಾಡುತ್ತಾರೆ ಎನ್ನುವುದೇ ‘ದಸ್ಕತ್’ ಮುಂದುವರಿದ ಕಥೆ.

‘ದಸ್ಕತ್’ ಎಂದರೆ ತುಳುವಿನಲ್ಲಿ ಸಹಿ ಎಂದರ್ಥ. ಅಷ್ಟಕ್ಕೂ ಇದು ಕೇವಲ ಸಹಿಯ ಕುರಿತ ಕಥೆಯಲ್ಲ. ಬದಲಾಗಿ, ಸಹಿ ಹಿಂದೆ ಎದುರಿಸುವ ಅವಮಾನದ ಕಥೆ. ಇಲ್ಲಿ ಅಸಹಾಯಕರ ಸಿಟ್ಟಿದೆ, ನೆತ್ತಿಗೇರುವ ಕೋಪವಿದೆ. ಘರ್ಷಣೆಯಿದೆ. ಇವೆಲ್ಲದರ ಜತೆಗೆ ಕರಾವಳಿಯ ಹಸಿರ ಸಿರಿ, ಗುಡಿಸಲು ಜೋಪಡಿ, ಕಲೆ, ಸಂಸ್ಕೃತಿ, ಜಾನಪದ ಹಾಗೂ ಚಲನಶೀಲ ಬದುಕಿದೆ. ಇವೆಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಿರ್ದೇಶಕ ಅನೀಶ್ ಪೂಜಾರಿ ವೇಣೂರು ‘ದಸ್ಕತ್’ನಲ್ಲಿ ಚಿತ್ರಿಸಿದ್ದಾರೆ. ಈ ಹಿಂದೆ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋ ಮೂಲಕ ರಂಜಿಸಿದ್ದ ಅನೀಶ್, ಗಂಭೀರ ಕಥೆ ಹೇಳುವ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಕರಾವಳಿ ಭಾಗದ ತಳಸಮುದಾಯದ ಬಗ್ಗೆ ಹಲವಾರು ಕಥೆಗಳು ಬಂದಿವೆ. ಅದಕ್ಕೆ ಇದೊಂದು ಸೇರ್ಪಡೆಯಾದರೆ, ಇಲ್ಲಿ ಅವರು ಆಯ್ಕೆ ಮಾಡಿಕೊಂಡಿರುವ ವಿಷಯ ವಿಶೇಷ ಎನಿಸುತ್ತದೆ. ಕಥೆಗೆ ತಕ್ಕಂತೆ ಹೆಣೆದಿರುವ ಪಾತ್ರಗಳು ಗಮನಸೆಳೆಯುತ್ತವೆ. ಪ್ರತಿ ಪಾತ್ರವೂ ಕುತೂಹಲ ಮೂಡಿಸುತ್ತದೆ. ಸಂಭಾಷಣೆಯ ಬದಲು ಕೆಲ ವಿಷಯಗಳನ್ನು ದೃಶ್ಯಗಳಲ್ಲಿ ತೋರಿಸಿರುವುದು ಇಷ್ಟವಾಗುತ್ತದೆ. ಒಟ್ಟಿನಲ್ಲಿ ಜನಸಮುದಾಯದ ಕಥೆಯಲ್ಲಿ ಕುತೂಹಲ, ಮನರಂಜನೆ ಇದ್ದು, ಸಿನಿಮಾ ಬೋರ್ ಎನಿಸುವುದಿಲ್ಲ. ಚಿತ್ರದ ಪಾತ್ರಗಳು ಹಾಗೂ ಕರಾವಳಿ ಸೊಬಗನ್ನು ದೃಶ್ಯಕಾವ್ಯದಂತೆ ಸೃಷ್ಟಿಸಿರುವ ಸಂತೋಷ್ ಆಚಾರ್ಯ ಛಾಯಾಗ್ರಹಣ ಚಿತ್ರದ ಹೈಲೈಟ್. ಎಲ್ಲ ಪಾತ್ರಧಾರಿಗಳು ನ್ಯಾಯ ಒದಗಿಸಿದ್ದಾರೆ. ಹಾಗಾಗಿ, ಈ ಚಿತ್ರಕ್ಕೆ ಇವರೇ ನಾಯಕ ನಟ ಎಂದು ಹೇಳುವುದು ಸುಲಭವಲ್ಲ. ಕರಾವಳಿ ಸೊಗಡಿನ ಅನೀಶ್ ಸಂಭಾಷಣೆ ಇಷ್ಟವಾಗುತ್ತದೆ. ಈ ವರ್ಷದ ಸದಭಿರುಚಿ ಚಿತ್ರಗಳ ಸಾಲಿಗೆ ‘ದಸ್ಕತ್’ ಸೇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net