

ಮೈಸೂರು: ಕರೊನಾ ಲಾಕ್ಡೌನ್ ಸಡಿಲಗೊಳ್ಳುತ್ತಿದ್ದಂತೆ ಸಿನಿಮಾ ತಂಡಗಳು ಯಥಾಸ್ಥಿತಿಗೆ ಮರಳುತ್ತಿವೆ. ಈಗಾಗಲೇ ಹಲವು ಚಿತ್ರತಂಡಗಳು ರಾಜ್ಯಾದ್ಯಂತ ಸದ್ದಿಲ್ಲದೆ ಚಿತ್ರೀಕರಣ ಮಾಡುವುದರಲ್ಲಿ ತೊಡಗಿಸಿಕೊಂಡಿವೆ.
ಶ್ರೀಮುರಳಿ ಅಭಿನಯದ 'ಮದಗಜ' ಚಿತ್ರದ ಚಿತ್ರೀಕರಣ ಸಹ ಕೆಆರ್ಎಸ್ ಹಿನ್ನೀರಿನ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ಗುರುವಾರ ಚಿತ್ರೀಕರಣ ಸ್ಥಳಕ್ಕೆ 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅವರು ಸರ್ಪ್ರೈಸ್ ಭೇಟಿ ಕೊಟ್ಟಿದ್ದಾರೆ.
ದರ್ಶನ್ ಅವರು ಲಾಕ್ಡೌನ್ ಶುರುವಾದಾಗಿನಿಂದ ಮೈಸೂರಿನ ತಮ್ಮ ಫಾರ್ಮ್ಹೌಸ್ನಲ್ಲೇ ಬೀಡುಬಿಟ್ಟಿದ್ದಾರೆ. ಈ ಮಧ್ಯೆ, 'ಮದಗಜ' ಚಿತ್ರದ ಚಿತ್ರೀಕರಣ, ಕೆಆರ್ಎಸ್ ಬ್ಯಾಕ್ವಾಟರ್ಸ್ ಪ್ರದೇಶದಲ್ಲಿ ನಡೆಯುತ್ತಿರುವ ಸುದ್ದಿ ಕೇಳಿ, ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟು, ಚಿತ್ರತಂಡದವರಿಗೆ ಶುಭ ಹಾರೈಸಿದ್ದಾರೆ.
ಒಟ್ಟು 19 ದಿನಗಳ ಕಾಲ ಚಿತ್ರೀಕರಣ ಮಾಡಲು ಚಿತ್ರತಂಡ ಉದ್ದೇಶಿಸಿದ್ದು, ಈ ಅವಧಿಯಲ್ಲಿ ಮಾತಿನ ಭಾಗದ ಚಿತ್ರೀಕರಣದ ಜತೆಗೆ ಒಂದಿಷ್ಟು ಹೊಡೆದಾಟದ ದೃಶ್ಯಗಳನ್ನು ಸಹ ಚಿತ್ರೀಕರಿಸಲಾಗುತ್ತದಂತೆ. ಈಗಾಗಲೇ ವಾರಣಾಸಿಯಲ್ಲಿ ಚಿತ್ರೀಕರಣ ಮುಗಿದಿದ್ದು, ಮೈಸೂರಿನ ಶೂಟಿಂಗ್ ಮುಗಿದರೆ ಅಲ್ಲಿಗೆ ಚಿತ್ರದ ಶೇ. 70 ಭಾಗ ಮುಕ್ತಾಯವಾದಂತೆ. ನಾಲ್ಕು ಹಾಡುಗಳ ಪೈಕಿ ಒಂದು ಹಾಡಿನ ಕೆಲಸ ಈಗಾಗಲೇ ಮುಗಿದಿದೆ.
'ಮದಗಜ' ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದು, ದಕ್ಷಿಣ ಭಾರತದ ಜನಪ್ರಿಯ ನಟರೊಬ್ಬರು ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರಂತೆ. ಈ ಹಿಂದೆ 'ಅಯೋಗ್ಯ' ಚಿತ್ರವನ್ನು ನಿರ್ದೇಶಿಸಿದ್ದ ಮಹೇಶ್ ಗೌಡ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು 'ಹೆಬ್ಬುಲಿ' ಮತ್ತು 'ರಾಬರ್ಟ್' ಚಿತ್ರಗಳನ್ನು ನಿರ್ಮಿಸಿರುವ ಉಮಾಪತಿ ಶ್ರೀನಿವಾಸ್ ಗೌಡ, ಈ ಚಿತ್ರನ್ನು ನಿರ್ಮಾಣ ಮಾಡುತ್ತಿದ್ದಾರೆ.