ದರ್ಶನ್-ಪ್ರೇಮ್ ಹೊಸ ಚಿತ್ರ ... ಸುದ್ದಿ ನಿರಾಕರಿಸಿದ ರಕ್ಷಿತಾ ಪ್ರೇಮ್​

Prem - Darshan
Published on

ಬೆಂಗಳೂರು: ಕೆಲವು ದಿನಗಳ ಹಿಂದಿನ ಮಾತು. ‘ಜೋಗಿ’ ಪ್ರೇಮ್ ಅವರ ಟ್ವಿಟರ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಲಾಗಿತ್ತು. ಸುದೀಪ್ ಅವರ ಜತೆಗೆ ಚಿತ್ರ ಮಾಡುತ್ತಿರುವುದಾಗಿ ಪ್ರೇಮ್ ಹೇಳಿಕೊಂಡಿದ್ದರು. ಸದ್ಯದಲ್ಲೇ ಚಿತ್ರದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡುವುದಾಗಿಯೂ ಅವರು ಘೋಷಿಸಿದ್ದರು. ಆ ನಂತರ, ಗೊತ್ತಾಗಿದ್ದೇನೆಂದರೆ ಅದೊಂದು ಸುಳ್ಳುಸುದ್ದಿ ಎಂದು. ಯಾರೋ ಪ್ರೇಮ್ ಹೆಸರಿನಲ್ಲಿ ನಕಲಿ ಪೇಜ್ ಸೃಷ್ಟಿ ಮಾಡಿ, ಈ ತರಹ ಸುಳ್ಳುಸುದ್ದಿ ಹಬ್ಬಿಸಿದ್ದರು.

ಈಗ ಅದು ಮತ್ತೊಮ್ಮೆ ರಿಪೀಟ್ ಆಗಿದೆ. ಈ ಬಾರಿ ಸುದೀಪ್ ಬದಲು ದರ್ಶನ್ ಜತೆಗೆ ಪ್ರೇಮ್ ಮಾಡುವುದಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಅವರದೇ ಹೆಸರಿನ ನಕಲಿ ಪೇಜ್‌ನಿಂದ ಹೊರಬಿದ್ದಿದೆ. ಸೋಮವಾರ ಸಂಜೆ ದರ್ಶನ್ ಅಭಿನಯದ 55ನೇ ಚಿತ್ರವನ್ನು ಪ್ರೇಮ್ ನಿರ್ದೇಶಿಸಲಿದ್ದಾರೆ ಮತ್ತು ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಮತ್ತು ಸ್ಟ್‌ಲುಕ್ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಅವರ ನಕಲಿ ಪೇಜ್‌ನಲ್ಲಿ ಕಾಣಿಸಿಕೊಂಡಿತ್ತು.

ಇದು ನಕಲಿ ಎಂದು ಗೊತ್ತಿರದ ಅಭಿಮಾನಿಗಳು, ಒಂದು ಕ್ಷಣ ಖುಷಿಯಾದರು. ಆದರೆ, ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಇದೊಂದು ನಕಲಿ ಪೇಜ್ ಮತ್ತು ಅದರಲ್ಲಿರುವುದು ಸುಳ್ಳುಸುದ್ದಿ ಎಂಬುದು ಗೊತ್ತಾಗುವುದಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ.

ಆ ನಂತರ ಪ್ರೇಮ್ ಪತ್ನಿ ರಕ್ಷಿತಾ ಸಹ ಇದು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಅದು ಪ್ರೇಮ್ ಖಾತೆ ಅಲ್ಲ, ಯಾರು ಈ ತರಹದ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೋ, ಅವರನ್ನು ದೇವರು ಚೆನ್ನಾಗಿಟ್ಟಿರಲಿ. ದರ್ಶನ್ ಮತ್ತು ಪ್ರೇಮ್ ಒಟ್ಟಿಗೆ ಚಿತ್ರ ಮಾಡುವುದನ್ನು ನೋಡುವುದಕ್ಕೆ ನಾನು ಇಷ್ಟಪಡುತ್ತೇನೆ. ಆದರೆ, ಸದ್ಯಕ್ಕೆ ಇದು ಸುಳ್ಳು’ ಎಂದಿದ್ದಾರೆ.

Darshan

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net