ಕೃಷ್ಣನ ಹುಟ್ಟುಹಬ್ಬಕ್ಕೆ ತ್ರಿಬಲ್​ ಸಂಭ್ರಮ; ಪರಿ ಜತೆ ಮೊದಲ ಬರ್ತಡೇ, ಬ್ರ್ಯಾಟ್​ ಟೀಸರ್, ಫಾದರ್ ಪೋಸ್ಟರ್ ಬಿಡುಗಡೆ

SC
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟ ಡಾರ್ಲಿಂಗ್​ ಕೃಷ್ಣ ಗುರುವಾರ 40ನೇ ವಸಂತಕ್ಕೆ ಕಾಲಿರಿಸಿದ್ದಾರೆ. ವಿಶೇಷ ಅಂದರೆ, ಈ ವರ್ಷದ ಹುಟ್ಟುಹಬ್ಬ ಅವರಿಗೆ ತುಂಬ ವಿಶೇಷ. ಏಕೆಂದರೆ ಮಗಳು ಪರಿ ಜನಿಸಿದ ಬಳಿಕ ಅವರು ಆಚರಿಸಿಕೊಳ್ಳುತ್ತಿರುವ ಮೊದಲ ಬರ್ತಡೇ ಇದು. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದ ಅವರು, "ಈ ಬಾರಿಯ ಹುಟ್ಟುಹಬ್ಬ ನನಗೆ ಸ್ಪೆಷಲ್​. ಅದಕ್ಕೆ ಮೊದಲ ಕಾರಣ ಪರಿ. ಮಗಳು ಜನಿಸಿದ ಬಳಿಕ ಮೊದಲ ಬಾರಿಗೆ ಆಕೆಯ ಜತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಜತೆಗೆ "ಬ್ರ್ಯಾಟ್​' ಚಿತ್ರದ ಟೀಸರ್​ ಮತ್ತು "ಫಾದರ್​' ಸಿನಿಮಾದ ಪೋಸ್ಟರ್​ ಕೂಡ ಬಿಡುಗಡೆ ಮಾಡಿರುವುದು ಖುಷಿ ನೀಡಿದೆ' ಎಂದು ಹೇಳಿಕೊಳ್ಳುತ್ತಾರೆ.

ಈ ವರ್ಷ ಎರಡು ಫಿಕ್ಸ್​

ಕಳೆದ ಸೆ. 5ರಂದು ಮುದ್ದುಮಗಳು ಪರಿಗೆ ಫಾದರ್​ ಆದ ಕೃಷ್ಣ, ನಿರ್ದೇಶಕ ಆರ್​. ಚಂದ್ರು ನಿರ್ಮಿಸುತ್ತಿರುವ, ರಾಜ್​ ಮೋಹನ್​ ನಿರ್ದೇಶಿಸುತ್ತಿರುವ "ಫಾದರ್​' ಚಿತ್ರದಲ್ಲೂ ನಟಿಸುತ್ತಿದ್ದು, ಚಿತ್ರತಂಡ ಅವರಿಗೆ ಪೋಸ್ಟರ್​ ಉಡುಗೊರೆ ನೀಡಿದೆ. ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಜತೆಗೆ ವಾರಾಣಸಿಯಲ್ಲೂ ಶೂಟಿಂಗ್​ ನಡೆಸಲಾಗಿದೆ. ಡಾರ್ಲಿಂಗ್​ ಕೃಷ್ಣಗೆ ಅಮೃತಾ ಐಯಂಗಾರ್​ ನಾಯಕಿಯಾಗಿದ್ದು, ನಾಯಕನ ತಂದೆಯ ಪಾತ್ರದಲ್ಲಿ ಪ್ರಕಾಶ್​ ರಾಜ್​ ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್​ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್​-ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ.

"ಕೌಸಲ್ಯ ಸುಪ್ರಜಾ ರಾಮ' ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಶಶಾಂಕ್​ ಮತ್ತು ಕೃಷ್ಣ, "ಬ್ರ್ಯಾಟ್​' ಚಿತ್ರದಲ್ಲಿ ಮತ್ತೆ ಕೈಜೋಡಿಸಿರುವುದು ಗೊತ್ತಿದೆ. ಈ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್​ ಇಂಡಿಯಾ ಮೂಡಿಬರಲಿದ್ದು, ಟೀಸರ್​ ಕೂಡ ಐದೂ ಭಾಷೆಗಳಲ್ಲಿ ರಿಲೀಸ್​ ಮಾಡಲಾಗಿದೆ. ಚಿತ್ರದ ಬಗ್ಗೆ ಕೃಷ್ಣ, "ಇವತ್ತಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಚಿತ್ರವಿದು. ಎರಡು ಲುಕ್​ಗಳಲ್ಲಿ ಕಾಣಿಸಿಕೊಂಡಿದ್ದೇನೆ' ಎನ್ನುತ್ತಾರೆ. "ಬ್ರ್ಯಾಟ್​' ಮತ್ತು "ಫಾದರ್​' ಇದೇ ವರ್ಷ ತೆರೆಗೆ ಬರಲಿವೆ.

ಲವ್​ ಮಾಕ್ಟೇಲ್​ 3ಗೆ ಸಿದ್ಧತೆ

ನಟ ಕೃಷ್ಣ 2020ರಲ್ಲಿ "ಲವ್​ ಮಾಕ್ಟೇಲ್​' ಮೂಲಕ ಡೈರೆಕ್ಟರ್​ ಕ್ಯಾಪ್​ ಧರಿಸಿ, ಗೆಲುವಿನ ನಗೆ ಬೀರಿದ್ದರು. ನಂತರ 2020ರಲ್ಲಿ ಅದರ ಸೀಕ್ವೆಲ್​ ಕೂಡ ಯಶಸ್ಸು ಕಂಡಿತ್ತು. ಇದೀಗ ಅವರು "ಲವ್​ ಮಾಕ್​ಟೇಲ್​ 3'ಗೆ ಸಿದ್ಧತೆ ನಡೆಸುತ್ತಿದ್ದು, "ಕಥೆಯ ಕೆಲಸ ಅಂತಿಮ ಹಂತದಲ್ಲಿದೆ. ಹೀಗಾಗಿ ಹೊಸ ಪ್ರಾಜೆಕ್ಟ್​ ಯಾವುದನ್ನೂ ಒಪ್ಪಿಕೊಳ್ಳುತ್ತಿಲ್ಲ. "ಬ್ರ್ಯಾಟ್​' ಮತ್ತು "ಫಾದರ್​' ಚಿತ್ರಗಳು ತೆರೆಗೆ ಬರುವಷ್ಟರಲ್ಲಿ "ಲವ್​ ಮಾಕ್ಟೇಲ್​ 3' ಕುರಿತು ಅಧಿಕೃತ ಘೋಷಣೆ ಮಾಡಿ, ಶೂಟಿಂಗ್​ ಪ್ರಾರಂಭಿಸಲಿದ್ದೇವೆ. ಮುಂದಿನ ವರ್ಷ ಈ ಟ್ರೀಕ್ವೆಲ್​ ರಿಲೀಸ್​ ಆಗಲಿದೆ' ಎಂದು ಮಾಹಿತಿ ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net