

ಬೆಂಗಳೂರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿಗಳನ್ನು ಸಿನಿಮಾ ಮಾಡುವುದಕ್ಕೆ ಬಯಸುತ್ತಿರುವ ಹಲವು ನಿರ್ದೇಶಕರು ಇದ್ದಾರೆ. ಆದರೆ, ಇಲ್ಲೊಬ್ಬರು ತೇಜಸ್ವಿ ಅವರ ಹೆಚ್ಚು ಪ್ರಸಿದ್ಧವಲ್ಲದ ಒಂದು ಸಣ್ಣಕಥೆಯನ್ನು ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಆ ಕಥೆಯೇ ‘ಡೇರ್ಡೆವಿಲ್ ಮುಸ್ತಾಫಾ’. ಈ ಚಿತ್ರವನ್ನು ತೆರೆಯ ಮೇಲೆ ತರುವುದಕ್ಕೆ ಹೊರಟಿರುವವರು ಶಶಾಂಕ್ ಸೋಗಾಲ್. ಶಶಾಂಕ್ ಇದಕ್ಕೂ ಮುನ್ನ ‘ಫಟಿಂಗ’ ಎಂಬ ಕಿರುಚಿತ್ರ ಮಾಡಿದ್ದರು. ಇದೀಗ ‘ಡೇರ್ಡೆವಿಲ್ ಮುಸ್ತಾಫಾ’ ಕಥೆಯ ಹಕ್ಕುಗಳನ್ನು ಪಡೆದಿರುವ ಅವರು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.
ಮಂಗಳವಾರ (ಸೆ.08) ತೇಜಸ್ವಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ಅಧಿಕೃತವಾಗಿ ಘೋಷಿಸುವುದರ ಜತೆಗೆ, ಟೀಸರ್ ಸಹ ಬಿಡುಗಡೆ ಮಾಡಲಾಗಿದೆ. ಎಲ್ಲ ಸರಿ, ತೇಜಸ್ವಿಯವರ ಈ ಕಥೆಯೇ ಏಕೆ? ಈ ಪ್ರಶ್ನೆಯನ್ನು ಶಶಾಂಕ್ ಅವರ ಮುಂದಿಟ್ಟರೆ, ‘ಈಗಿನ ಕಾಲಘಟ್ಟಕ್ಕೆ ಈ ಕಥೆ ಬಹಳ ಮಹತ್ವದ್ದೆನಿಸುತ್ತದೆ. ಬಹಳ ಗಂಭೀರವಾದ ವಿಷಯವೊಂದನ್ನು ಅವರು ತಮಾಷೆಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆ ಕಥೆಯನ್ನು ಮೂಲವಾಗಿಟ್ಟುಕೊಂಡು, ಮಿಕ್ಕಂತೆ ಒಂದಿಷ್ಟು ವಿಷಯಗಳನ್ನು ಸೇರಿಸಿ ಚಿತ್ರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಶಾಂಕ್.
ಈ ಚಿತ್ರವು ಕ್ರೌಡ್ಫಂಡಿಂಗ್ ಮೂಲಕ ನಿರ್ವಣವಾಗುತ್ತಿದ್ದು, ತೇಜಸ್ವಿ ಅವರ ಅಭಿಮಾನಿಗಳು ಸೇರಿಕೊಂಡು ಚಿತ್ರ ನಿರ್ವಿುಸುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಹೊಸಬರು ನಟಿಸುತ್ತಿದ್ದು, ಮಿಕ್ಕಂತೆ ಮಂಡ್ಯ ರಮೇಶ್, ಉಮೇಶ್, ನಾಗಭೂಷಣ್ ಮುಂತಾದವರು ನಟಿಸುತ್ತಿದ್ದಾರೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಚಿತ್ರೀಕರಣ ನಡೆಯಲಿದ್ದು, ರಾಹುಲ್ ರಾಯ್ ಛಾಯಾಗ್ರಹಣ ಮಾಡುತ್ತಿದ್ದಾರೆ.