

ಬೆಂಗಳೂರು: ದಾನಿಶ್ ಸೇಠ್ ಇದುವರೆಗೂ ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ‘ಹಂಬಲ್ ಪೊಲಿಟಿಶಿಯನ್ ನೊಗರಾಜ್’, ‘ಫ್ರೆಂಚ್ ಬಿರಿಯಾನಿ’, ‘ಒನ್ ಕಟ್ ಟೂ ಕಟ್’ ... ಹೀಗೆ ಯಾವುದೇ ಚಿತ್ರ ತೆಗೆದುಕೊಳ್ಳಿ, ನಗಿಸಿದ್ದೇ ಹೆಚ್ಚು. ಈಗ ಅಪರೂಪಕ್ಕೆ ಗಂಭೀರ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ‘ಸೋಲ್ಡ್’.
ಹೆಸರು ಹೇಳುವಂತೆ ‘ಸೋಲ್ಡ್’, ಮಾನವ ಕಳ್ಳಸಾಗಾಣಿಕೆ ಜಾಲದ ಕುರಿತಾಗಿ ಸಾಗುವ ಚಿತ್ರ. ಈ ಜಾಲ ಬೇಧಿಸುವ ಪೊಲೀಸ್ ಅಧಿಕಾರಿಯಾಗಿ ದಾನಿಶ್ ಸೇಠ್ ಇದ್ದಾರೆ. ಇನ್ನು ನಾಯಕಿಯಾಗಿ ಕಾವ್ಯಾ ಶೆಟ್ಟಿ ಕಾಣಿಸಿಕೊಂಡಿದ್ದು, ಅವರಿಲ್ಲಿ ಪತ್ರಕರ್ತೆಯಾಗಿದ್ದಾರೆ. ಇಬ್ಬರೂ ಸೇರಿ ಏನು ಸಾಹಸ ಮಾಡುತ್ತಾರೆ ಎಂಬುದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು. ಚಿತ್ರ ನೋಡುವುದಕ್ಕೆ ಮಾರ್ಚ್ 4ರವರೆಗೂ ಕಾಯಬೇಕು.
‘ಸೋಲ್ಡ್’ನಲ್ಲಿ ದಾನಿಶ್ ಮತ್ತು ಕಾವ್ಯಾ ಜತೆಗೆ ಭರತ್ ಜೆಬಿ, ಸಿದ್ಧಾರ್ಥ್ ಮಾಧ್ಯಮಿಕ, ‘ಉಗ್ರಂ’ ಮಂಜು, ಭವಾನಿ ಪ್ರಕಾಶ್ ಮುಂತಾದವರು ನಟಿಸಿದ್ದಾರೆ. ಈ ಕ್ರೖೆಂ ಥ್ರಿಲ್ಲರ್ ಚಿತ್ರವನ್ನು ಪ್ರೇರಣಾ ಅಗರವಾಲ್ ನಿರ್ದೇಶನ ಮಾಡಿದರೆ, ದೀಪಂ ಕೊಹ್ಲಿ ನಿರ್ಮಾಣ ಮಾಡುವುದರ ಜತೆಗೆ ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಹಾಡಿದ್ದು, ಜೀತ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ.