

ಬೆಂಗಳೂರು: ‘ರಾಮಾ ರಾಮಾ ರೇ’ ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್ ಹಾಗೂ ಡಾಲಿ ಧನಂಜಯ ಬಹಳ ದಿನಗಳ ಬಳಿಕ ಒಂದೇ ಸಿನಿಮಾದಲ್ಲಿ ಜತೆಗೂಡುತ್ತಿದ್ದಾರೆ. ಆ ಮೂಲಕ ‘ಜಯನಗರ 4ನೇ ಬ್ಲಾಕ್’ ಹ್ಯಾಂಗೋವರ್ಗೆ ಪ್ರೇಕ್ಷಕರನ್ನು ಕೊಂಡೊಯ್ಯಲು ಇಬ್ಬರೂ ಸಜ್ಜಾಗಿದ್ದಾರೆ. ಅಂದರೆ, ‘ಜಯನಗರ 4ನೇ ಬ್ಲಾಕ್’ ಕಿರುಚಿತ್ರ ಮೂಲಕ ಬಣ್ಣದಲೋಕಕ್ಕೆ ಪ್ರವೇಶಿಸಿ ಮೋಡಿ ಮಾಡಿರುವ ಈ ಜೋಡಿ ಮತ್ತೊಮ್ಮೆ ಒಂದಾಗುವ ಮೂಲಕ ಕುತೂಹಲ ಮೂಡಿಸಿದೆ. ಹಾಗಂತ ಈ ಸಿನಿಮಾಗೆ ಸತ್ಯಪ್ರಕಾಶ್ ನಿರ್ದೇಶನ ಮಾಡುತ್ತಿಲ್ಲ.
‘ಈ ಚಿತ್ರಕ್ಕೆ ನಾನು ಕಥೆ-ಚಿತ್ರಕಥೆ ಬರೆದಿದ್ದೇನೆ. ನಿರ್ದೇಶನ ನಮ್ಮದೇ ತಂಡದವರೊಬ್ಬರು ಮಾಡಲಿದ್ದಾರೆ. ಈ ಸಿನಿಮಾ ಹಾಸ್ಯ ಪ್ರಧಾನವಾಗಿ ಇರಲಿದ್ದು, ಧನಂಜಯ ನಾಯಕರಾಗಿ ಅಭಿನಯಿಸಲಿದ್ದಾರೆ. ‘ಜಯನಗರ 4ನೇ ಬ್ಲಾಕ್’ನಲ್ಲಿ ಅವರು ಒಳ್ಳೇ ಹುಡುಗನ ಪಾತ್ರದಲ್ಲಿ, ‘ಟಗರು’ ಚಿತ್ರದಲ್ಲಿ ಡಾಲಿ ಆಗಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವೆರಡನ್ನೂ ಹದವಾಗಿ ಬೆರೆಸಿಕೊಂಡು ಧನಂಜಯ ಅವರನ್ನು ಇಲ್ಲಿ 2 ಶೇಡ್ನಲ್ಲಿ ತೋರಿಸಲಾಗುವುದು’ ಎನ್ನುತ್ತಾರೆ ಸತ್ಯಪ್ರಕಾಶ್.
ಈ ಸಿನಿಮಾಗೆ ಇಬ್ಬರೂ ಬಂಡವಾಳ ಹೂಡುತ್ತಿರುವುದು ಮತ್ತೊಂದು ವಿಶೇಷ. ಆ ಮೂಲಕ ಧನಂಜಯ ಕೂಡ ನಿರ್ವಪಕರಾಗಿ ಬಡ್ತಿ ಹೊಂದಿದ್ದಾರೆ. ಸತ್ಯಪ್ರಕಾಶ್ ಅವರ ‘ಸತ್ಯ ಪಿಕ್ಚರ್ಸ್’ ಹಾಗೂ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ವಣವಾಗಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭಿಸುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಚಿತ್ರದ ಶೀರ್ಷಿಕೆ, ಇತರ ಪಾತ್ರವರ್ಗ, ತಾಂತ್ರಿಕ ಬಳಗ ಇತ್ಯಾದಿ ಕುರಿತ ಮಾಹಿತಿ ಚಿತ್ರತಂಡ ಮುಂದಿನ ದಿನಗಳಲ್ಲಿ ಹೇಳಿಕೊಳ್ಳಲಿದೆ.