

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯಂತೆ ‘ಜನತಾ ಕರ್ಫ್ಯೂ’ಗೆ ನಮೋ ಎಂದಿರುವ ಸ್ಯಾಂಡಲ್ವುಡ್, ‘ಕ್ಲ್ಯಾಪ್’ ಮಾಡುವ ಮೂಲಕ ಕರೊನಾ ವೈರಸ್ಅನ್ನು ಹಿಮ್ಮೆಟ್ಟಿಸಲು ‘ಮುಹೂರ್ತ’ ನೆರವೇರಿಸಿದೆ. ಅಂದರೆ, ಚಿತ್ರರಂಗದ ಹಲವಾರು ತಾರೆಯರು ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಮನೆಯಲ್ಲೇ ಇದ್ದು ಕರ್ಫ್ಯೂನಲ್ಲಿ ಪಾಲ್ಗೊಂಡಿದ್ದಲ್ಲದೆ, ಈ ಮಧ್ಯೆ ಸಂಜೆ ಐದಕ್ಕೆ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟುವ ಮೂಲಕ ‘ಕರೊನಾ ಯೋಧ’ರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.
ಸ್ಯಾಂಡಲ್ವುಡ್ ಮಟ್ಟಿಗೆ ಟ್ವಿಟರ್ನಲ್ಲಿ ಅತ್ಯಧಿಕ ಫಾಲೋವರ್ಸ್ ಹೊಂದಿರುವ ಕಿಚ್ಚ ಸುದೀಪ್, ಐದು ಗಂಟೆಗೆ ಸರಿಯಾಗಿ ತಾವಿರುವ ಜಾಗದಿಂದ ಹೊರಬಂದು ಚಪ್ಪಾಳೆ ತಟ್ಟಿದ್ದಲ್ಲದೆ, ‘ಕ್ಲ್ಯಾಪ್ ಇಂಡಿಯಾ’ ಎಂದೂ ಕರೆಕೊಟ್ಟಿದ್ದಾರೆ. ಎಂಥ ಅದ್ಭುತ ಯೋಚನೆ, ಎಂಥ ಅದ್ಭುತ ಉದ್ದೇಶ. ನಾವು ಕರ್ಫ್ಯೂನಲ್ಲಿ ಇದ್ದಂತಿರಲಿಲ್ಲ. ನಾವು ಈ ಭೂಮಿತಾಯಿಗೆ ಸ್ವಲ್ಪ ವಿರಾಮ ಕೊಟ್ಟ ಹಾಗಿತ್ತು. ಇದು ನಿಯಮಿತ ಅಭ್ಯಾಸವಾಗಬೇಕು. ಭೂಮಿತಾಯಿ ಇದ್ದರೆ ಮಾತ್ರ ನಾವೆಲ್ಲ ಇರಲು ಸಾಧ್ಯ..’ ಎಂಬ ಸಂದೇಶದೊಂದಿಗೆ ಚಪ್ಪಾಳೆ ತಟ್ಟುತ್ತಿರುವ ವಿಡಿಯೋವನ್ನು ಸುದೀಪ್ ಟ್ವೀಟ್ ಮಾಡಿದ್ದಾರೆ.
‘ನಮ್ಮೆಲ್ಲರನ್ನೂ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಸೇರಿ ಎಲ್ಲರಿಗೂ ಧನ್ಯವಾದ ಹೇಳಲು ಈ ಚಪ್ಪಾಳೆ. ಕರೊನಾ ವೈರಸ್ ಹಿಮ್ಮೆಟ್ಟಿಸಲು ನಾವೆಲ್ಲ ಜತೆಯಾಗಬೇಕು, ಆ ನಿಟ್ಟಿನಲ್ಲಿ ಸರ್ಕಾರ ಮಾಡಿರುವ ನಿಯಮಗಳನ್ನೆಲ್ಲ ನಾವು ಪಾಲಿಸಬೇಕು. ಎಲ್ಲರೂ ಮನೆಯಲ್ಲಿರಿ, ಮನೆಯವರನ್ನೆಲ್ಲ ಚೆನ್ನಾಗಿ ನೋಡಿಕೊಳ್ಳಿ’ ಎಂದು ನಟ ಪುನೀತ್ ರಾಜ್ಕುಮಾರ್ ಕೂಡ ವಿಡಿಯೋ ಸಹಿತ ಹೇಳಿಕೊಂಡಿದ್ದಾರೆ.
ನಟ ಜಗ್ಗೇಶ್ ತಮ್ಮ ಮನೆಯ ದೇವರಕೋಣೆಯಲ್ಲಿ ಭಗವದ್ಗೀತೆಯ ಸಂದೇಶವೊಂದನ್ನು ಉಲ್ಲೇಖಿಸಿ ಚಪ್ಪಾಳೆ ತಟ್ಟಿದ್ದಾರೆ. ನಟ ರಮೇಶ್ ಅರವಿಂದ್ ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟಿದ ವಿಡಿಯೋ ಹಂಚಿಕೊಂಡಿದ್ದಾರೆ. ನಟ ಅನಿರುದ್ಧ ಕುಟುಂಬ ಸಹಿತವಾಗಿ ಚಪ್ಪಾಳೆ, ಗಂಟೆ- ಶಂಖನಾದಗಳೊಂದಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಟರಾದ ಅರ್ಜುನ್ ಸರ್ಜಾ, ವಸಿಷ್ಠ ಸಿಂಹ, ಧನಂಜಯ, ಸೃಜನ್ ಲೋಕೇಶ್, ನೆನಪಿರಲಿ ಪ್ರೇಮ್ ಚಿರು ಸರ್ಜಾ, ಸುಂದರ್ ರಾಜ್, ನಟಿಯರಾದ ಸುಮಲತಾ ಅಂಬರೀಷ್, ರಾಗಿಣಿ ದ್ವಿವೇದಿ, ಸಂಯುಕ್ತಾ ಹೊರನಾಡು, ಮೇಘನಾ ಗಾಂವ್ಕರ್, ಪ್ರಣೀತ್ ಸುಭಾಷ್, ನೀತು ಶೆಟ್ಟಿ, ಮೇಘನಾ ರಾಜ್, ಪ್ರಮೀಳಾ ಜೋಷಾಯ್, ಐಶ್ವರ್ಯಾ ಸರ್ಜಾ ಮುಂತಾದವರು ಕರೊನಾ ವಿರುದ್ಧ ಹೋರಾಡುತ್ತ ರಕ್ಷಣೆಗೆ ನಿಂತಿರುವ ವೈದ್ಯರು, ಪೊಲೀಸರು, ಪೌರಕಾರ್ವಿುಕರು ಸೇರಿ ಎಲ್ಲರಿಗೂ ಚಪ್ಪಾಳೆ, ಜಾಗಟೆ, ಗಂಟೆ, ಶಂಖ ಇತ್ಯಾದಿಗಳ ಸದ್ದಿನೊಂದಿಗೆ ಧನ್ಯವಾದ ಅರ್ಪಿಸಿದ್ದಾರೆ.