23ಕ್ಕೆ ‘ಸೈನೈಡ್’ ರಿ-ರಿಲೀಸ್ : 19 ವರ್ಷಗಳ ಬಳಿಕ ರಿ-ರಿಲೀಸ್ ಆಗಲಿದೆ ತಾರಾ ಅಭಿನಯದ ಸಿನಿಮಾ

CYNIDE
Published on

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ‘ಗಂಧದ ಗುಡಿ’, ‘ಜಾಕಿ’, ‘ಕರಿಯ’, ‘ಬಹದ್ದೂರ್’ ಸೇರಿ ಹಲವು ಸಿನಿಮಾಗಳು ರಿ-ರಿಲೀಸ್ ಆಗಿವೆ. ಈ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆ ‘ಸೈನೈಡ್’. ಎಎಂಆರ್ ರಮೇಶ್ ನಿರ್ದೇಶನದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ನೈಜ ಘಟನೆಗಳ ಆಧಾರಿತ ‘ಸೈನೈಡ್’ ಚಿತ್ರ ಇದೇ ಮೇ 23ರಂದು ರಿ-ರಿಲೀಸ್ ಆಗಲಿದೆ. 2006ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ತಾರಾ, ರವಿ ಕಾಳೆ, ರಂಗಾಯಣ ರಘು, ಮಾಳವಿಕಾ ಅವಿನಾಶ್, ಉಷಾ ಭಂಡಾರಿ ನಟಿಸಿದ್ದರು. ತಾರಾಗೆ ಅತ್ಯುತ್ತಮ ನಟಿ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಎಂಬ ಎರಡು ರಾಜ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಕೆಲ ಸಣ್ಣ ಬದಲಾವಣೆಯೊಂದಿಗೆ ಇದೀಗ ಮತ್ತೆ ರಿಲೀಸ್ ಆಗುತ್ತಿದೆ.

ಎಎಂಆರ್ ರಮೇಶ್, ‘ಸೂಕ್ಷ್ಮ ವಿಚಾರ ಇರುವ ಕಾರಣ 2006ರಲ್ಲಿ ಸಿನಿಮಾ ತೆರೆಕಂಡಿದ್ದಾಗ ಸಣ್ಣ ಭಯವಿತ್ತು. ಆದರೆ, ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ ಜತೆಗೆ ಹತ್ತು ನಿಮಿಷ ಅವಧಿಯನ್ನು ಹೆಚ್ಚಿಸಿ, ಸಿನಿಮಾ ಮರು ಬಿಡುಗಡೆ ಮಾಡುತ್ತಿದ್ದೇವೆ. ಇದರ ಬೆನ್ನಲ್ಲೇ ‘ಸೈನೈಡ್’ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಸ್ಕ್ರಿಪ್ಟ್ ಕಾರ್ಯ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು. ತಾರಾ, ‘ಸೈನೈಡ್’ನಲ್ಲಿ ಮೃದುಲಾ ಎಂಬ ಮುಗ್ಧ ಹೆಣ್ಣಿನ ಪಾತ್ರದಲ್ಲಿದ್ದೆ. ಶೂಟಿಂಗ್ ವೇಳೆ ಮೃದುಲಾರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಆದರೆ, ಆಗಿರಲಿಲ್ಲ. ಅವರ ಪತಿ ರಂಗನಾಥ್ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡುತ್ತಿದ್ದರು. ಅವರಿಂದ ಪತ್ನಿಯ ಸ್ವಭಾವದ ಬಗ್ಗೆ ತಿಳಿದುಕೊಂಡಿದ್ದೆ. ಈಗ ಈ ಸಿನಿಮಾ ಮರುಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net