

ನವದೆಹಲಿ: ದಕ್ಷಿಣ ಆಫ್ರಿಕಾದಿಂದ ಆರಂಭವಾದ ಒಮಿಕ್ರಾನ್ ಸೋಂಕು ಎರಡು ವಾರದಲ್ಲಿ 38 ದೇಶಗಳಿಗೆ ಪಸರಿಸಿದ್ದು, ಭಾರತದಲ್ಲಿ ಮೂರನೇ ಅಲೆ ಏಳಲು ಕಾರಣವಾಗುವ ಸಾಧ್ಯತೆ ಇದೆ. ಈ ಪ್ರಭೇದದ ವೈರಸ್ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಬಿಗಿ ನಿಯಂತ್ರಣ ಕ್ರಮಗಳನ್ನು ಘೋಷಿಸಿವೆಯಾದರೂ, ಜನವರಿ ಇಲ್ಲವೆ ಫೆಬ್ರವರಿಯಲ್ಲಿ ಮೂರನೇ ಅಲೆಯ ಸಂಭವನೀಯತೆ ಇದೆ ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೋಂಕು ಪ್ರಸರಣ ತೀವ್ರವಾಗಿದ್ದರೂ ಲಸಿಕೆ ಅಭಿಯಾನ ಚುರುಕಿನಿಂದ ನಡೆಯುತ್ತಿರುವ ಕಾರಣ ಸಾವಿನ ಸಾಧ್ಯತೆ ಕಡಿಮೆ. ಆದರೆ, ಅನ್ಯ ವ್ಯಾಧಿಯಿಂದ ಬಳಲುತ್ತಿರುವವರಿಗೆ ಈ ಸೋಂಕು ತಗುಲಿದರೆ ಹೆಚ್ಚು ಅಪಾಯ ಎಂದು ಹೇಳಿದ್ದಾರೆ. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ಪ್ರಭೇದದ ವಿರುದ್ಧ ಬಹುತೇಕ ಜನರಲ್ಲಿ ಪ್ರತಿಕಾಯ ಪ್ರಬಲವಾಗಿದೆ. ಆದರೆ, ಅಜಾಗರೂಕತೆ ವರ್ತನೆಯು ಮೂರನೇ ಅಲೆಯನ್ನು ತೀವ್ರಗೊಳಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸೌಮ್ಯ ಸ್ವರೂಪದ ಮೂರನೇ ಅಲೆ: ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆ ನಡೆಯುವ ಸಂದರ್ಭದಲ್ಲಿ ಒಮಿಕ್ರಾನ್ ಪ್ರಸರಣ ಗರಿಷ್ಠ ಮಟ್ಟಕ್ಕೆ ಮುಟ್ಟುವ ಸಾಧ್ಯತೆ ಇದೆ. ಡೆಲ್ಟಾ ರೂಪಾಂತರಿಗೆ ಹೋಲಿಸಿದರೆ ಒಮಿಕ್ರಾನ್ ಸೋಂಕು ಸೌಮ್ಯವಾದ ಮೂರನೇ ಅಲೆಯ ಸಂಭವನೀಯತೆಯನ್ನು ಸೂಚಿಸುತ್ತದೆ. ಪ್ರಪಂಚದ ಬೇರೆ ಬೇರೆ ಕಡೆಯಲ್ಲೂ ಈ ಪ್ರಭೇದ ಸೌಮ್ಯ ರೀತಿಯ ಗುಣಲಕ್ಷಣವನ್ನು ವ್ಯಕ್ತಪಡಿಸಿದೆ. ಆದ್ದರಿಂದ ಗಾಬರಿ ಆಗುವ ಅವಶ್ಯಕತೆ ಇಲ್ಲ, ಜಾಗ್ರತೆ ವಹಿಸಿದರೆ ಸಾಕು. ರಾತ್ರಿ ವೇಳೆ ಕರ್ಫ್ಯೂ, ಜನರು ಸೇರುವುದನ್ನು ತಪ್ಪಿಸುವಂತಹ ನಿರ್ಬಂಧ ಕ್ರಮಗಳಿಂದ ಪ್ರಸರಣವನ್ನು ನಿಯಂತ್ರಿಸಬಹುದು ಎಂದು ಕಾನ್ಪುರ ಐಐಟಿಯ ಪ್ರೊಫೆಸರ್ ಮಣಿಂದ್ರ ಅಗರ್ವಾಲ್ ಹೇಳಿದ್ದಾರೆ. ಇವರು ಭಾರತದಲ್ಲಿ ಕರೊನಾ ಸಾಂಕ್ರಾ ಮಿಕದ ಪಥವನ್ನು ಗಣಿತೀಯವಾಗಿ ಪರಿಶೀಲಿಸಲು ಬಳಸುವ ಮಾದರಿ ರಚಿಸಿದವರಲ್ಲಿ ಒಬ್ಬರು.
ದೇಶದಲ್ಲಿ ಅರ್ಹರ ಪೈಕಿ ಶೇ. 50ರಷ್ಟು ಜನರಿಗೆ ಎರಡೂ ಡೋಸ್ ಲಸಿಕೆ ಹಾಕಲಾಗಿದೆ. ಒಟ್ಟಾರೆ 127.61 ಕೋಟಿ ಡೋಸ್ ಲಸಿಕೆ ಭಾನುವಾರದ ವರೆಗೆ ವಿತರಣೆ ಆಗಿದೆ.
| ಮನಸುಖ್ ಮಾಂಡವೀಯ ಕೇಂದ್ರ ಆರೋಗ್ಯ ಸಚಿವ
ಸಾವಿನ ಸಂಖ್ಯೆ ಏರಿಕೆ: ಭಾರತದ ದೈನಿಕ ಕೇಸ್ 8,895 ಇದ್ದು, ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗಿದೆ. 24 ತಾಸಿನಲ್ಲಿ 2,796 ಮಂದಿ ಸಾವನ್ನಪ್ಪಿದ್ದಾರೆ. ಬಿಹಾರ ಕರೊನಾ ಸಾವಿನ ಪ್ರಕರಣಗಳ ಪಟ್ಟಿಯನ್ನು ಮರುಪರಿಷ್ಕರಣೆ ಮಾಡಿದ್ದು, 2,400ಕ್ಕೂ ಹೆಚ್ಚು ಕೇಸ್ಗಳನ್ನು ಹೊಂದಾಣಿಕೆ ಮಾಡಿದ್ದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಆರು ತಿಂಗಳಲ್ಲಿ ಎರಡನೇ ಬಾರಿಗೆ ಮರಣ ಪಟ್ಟಿಯನ್ನು ಬಿಹಾರ ಮರುಹೊಂದಾಣಿಕೆ ಮಾಡಿದೆ. ಕೇರಳ ದಲ್ಲಿ ಒಂದೇ ದಿನದಲ್ಲಿ 263 ಮಂದಿ ಮರಣಿಸಿದ್ದಾರೆ. ಹೀಗಾಗಿ ದೇಶದ ಒಟ್ಟು ಮೃತರ ಸಂಖ್ಯೆ 4,73,326ಕ್ಕೆ ಏರಿದೆ. 24 ತಾಸಿನ ಅವಧಿಯಲ್ಲಿ 6,918 ಮಂದಿ ಚೇತರಿಸಿಕೊಂಡಿದ್ದು, ಇದರಿಂದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 99,155ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿ ವಾಲಯ ತಿಳಿಸಿದೆ.
ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಳ ಅಗತ್ಯ: ಎರಡನೇ ಅಲೆ ವೇಳೆ ಭಾರತದಲ್ಲಿ ವೈದ್ಯಕೀಯ ಮೂಲಸೌಕರ್ಯದ ಕೊರತೆ ಅಗಾಧವಾಗಿತ್ತು ಆಮ್ಲಜನಕದ ಕೊರತೆಯಿಂದ ಸಾವಿರಾರು ಜನರು ಅಸುನೀಗಿದರು. 3ನೇ ಅಲೆಯಲ್ಲಿ ಇಂಥ ಪರಿಸ್ಥಿತಿ ತಲೆದೋರಬಾರದೆಂದಾದರೆ ಮೂಲ ಸೌಕರ್ಯವನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಹಲವಾರು ಕಾರ್ಯ ನಡೆದಿದೆಯಾದರೂ, ಇವುಗಳು ಸಕಾಲಕ್ಕೆ ಲಭ್ಯವಾಗುತ್ತವೆ ಎಂಬುದು ಖಾತ್ರಿಯಾಗ ಬೇಕು ಎಂದು ಎಬ್ಲ್ಯೂಎಚ್ಒ ಆಗ್ನೇಯ ಏಷ್ಯಾ ಭಾಗದ ಪ್ರಾದೇ ಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಹಿಮಾಚಲದಲ್ಲಿ ಶೇ. 100ರಷ್ಟು ಲಸಿಕೀಕರಣ: ಹಿಮಾಚಲ ಪ್ರದೇಶ ನೂರಕ್ಕೆ ನೂರಷ್ಟು ಎರಡೂ ಡೋಸ್ ಲಸಿಕೆ ಹಾಕಿದ ರಾಜ್ಯ ಎಂಬ ಶ್ರೇಯವನ್ನು ಪಡೆದಿದೆ. ರಾಜ್ಯದಲ್ಲಿ 70 ಲಕ್ಷ ಜನಸಂಖ್ಯೆ ಇದ್ದು, ಈ ಪೈಕಿ ಅರ್ಹರಾದ 53.86 ಲಕ್ಷಕ್ಕೂ ಹೆಚ್ಚು ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಮೊದಲದ ಡೋಸ್ನಲ್ಲೂ ಶೇ.100ರಷ್ಟು ಪ್ರಗತಿ ಸಾಧಿಸಿದ ಮೊದಲ ರಾಜ್ಯ ಇದಾಗಿತ್ತು.
21ಕ್ಕೆ ಏರಿದ ಒಮಿಕ್ರಾನ್ ಕೇಸ್: ಮಹಾರಾಷ್ಟ್ರದಲ್ಲಿ ಏಳು, ರಾಜಸ್ಥಾನದಲ್ಲಿ ಒಂಬತ್ತು, ದೆಹಲಿಯಲ್ಲಿ ಒಂದು ಒಮಿಕ್ರಾನ್ (ಬಿ.1.1.529) ಪ್ರಕರಣ ಭಾನುವಾರ ದೃಢಪಟ್ಟಿದೆ. ಇದರಿಂದ ದೇಶದಲ್ಲಿ ಈ ಪ್ರಭೇದ ಸಂಖ್ಯೆ 21ಕ್ಕೆ ಏರಿದೆ. ಬೆಂಗಳೂರಿನಲ್ಲಿ ಎರಡು, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಒಂದೊಂದು ಸೋಂಕು ದೃಢಪಟ್ಟಿದ್ದವು.
ಒಮಿಕ್ರಾನ್ ಮೂರನೇ ಅಲೆ ಏಳಿಸುವಷ್ಟು ಪ್ರಬಲವಾಗಿದೆ. ಆದರೆ, ಡೆಲ್ಟಾ ಪ್ರಭೇದದ ಪ್ರಸರಣಕ್ಕಿಂತ ಆರು ಪಟ್ಟು ವೇಗವಾಗಿ ಇದು ಹರಡಲಿದೆ ಎಂಬುದು ಉತ್ಪ್ರೇಕ್ಷೆ. ಒಂದೂವರೆ ಪಟ್ಟು ಶಕ್ತಿಶಾಲಿ ಆಗಿರುವ ಸಾಧ್ಯತೆ ಇದೆ.
| ಡಾ. ಅನುರಾಗ್ ಅಗರ್ವಾಲ್ ಸಿಎಸ್ಐಆರ್ನ ಜೀನೋಮಿಕ್ಸ್, ಸಮಗ್ರ ಜೀವವಿಜ್ಞಾನದ ನಿರ್ದೇಶಕ
ಭಾರತದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ ಎಂದು ಈಗಲೆ ಹೇಳಲಾಗದು. ಆದರೆ, ಕೋವಿಡ್-19 ನಿಯಮವನ್ನು ಎಲ್ಲರೂ ಪಾಲಿಸುವುದು ಕ್ಷೇಮಕರ. ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ನಿಗಾ ಇರಿಸಿ, ಟೆಸ್ಟ್ ಕಡ್ಡಾಯ ಮಾಡಬೇಕು. ಜತೆಗೆ ಲಸಿಕೆಯ ಪರಿಣಾಮಕಾರಕತ್ವವನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಬೇಕಿದೆ. ಏಕೆಂದರೆ ಒಮಿಕ್ರಾನ್ ಪ್ರತಿಕಾಯಗಳನ್ನು ಭೇದಿಸುವಷ್ಟು ಶಕ್ತಿಶಾಲಿಯಾಗಿದೆ.
| ಡಾ.ರಣದೀಪ್ ಗುಲೇರಿಯಾ ಏಮ್್ಸ ಮುಖ್ಯಸ್ಥ
ಒಮಿಕ್ರಾನ್ನಿಂದ ಜಾಗತಿಕ ಆರ್ಥಿಕ ಬೆಳವಣಿಗೆ ಅಂದಾಜು ಕುಂಠಿತಗೊಳ್ಳುವ ಸಾಧ್ಯತೆ ಇದೆ. ಹೊಸ ರೂಪಾಂತರಿಯು ವೇಗವಾಗಿ ಹರಡುತ್ತಿದೆ.
| ಕ್ರಿಸ್ಟಲಿನಾ ಜಾರ್ಜಿವಾ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ