

ಬೆಂಗಳೂರು: ‘ಪಿತಾಜಿ.. ಪಿತಾಜಿ.. ಇನ್ನೂ ಬೆಲ್ ಹೊಡಿಲಿಲ್ವೆ.. ಅಯ್ಯೋ ಮಾರಮ್ಮನ್ ಡಿಸ್ಕೋ..!’ 1995ರಲ್ಲಿ ತೆರೆಗೆ ಬಂದಿದ್ದ ‘ಗಡಿಬಿಡಿ ಅಳಿಯ’ ಸಿನಿಮಾದಲ್ಲಿ ಹೀಗೊಂದು ಡೈಲಾಗ್ ಇತ್ತು. ಹಾಸ್ಯನಟ ಟೆನ್ನಿಸ್ ಕೃಷ್ಣ ಹೊಡೆದ ಆ ಡೈಲಾಗ್ ಅಂದು ಹಲವಾರು ಸಿನಿಪ್ರಿಯರ ಬಾಯಲ್ಲಿ ಮತ್ತೆ ಮತ್ತೆ ರಿಂಗಣಿಸಿತ್ತು.
ಅದೇ ಡೈಲಾಗ್ ಈಗ ಹಾಡಾಗಿ ಪರಿವರ್ತನೆ ಆಗಿದೆ. ಬರೀ ಕನ್ನಡದಲ್ಲಷ್ಟೇ ಅಲ್ಲ ಹಿಂದಿ, ತೆಲುಗು, ತಮಿಳು ಮತ್ತು ಇಂಗ್ಲಿಷ್ನಲ್ಲೂ ತಯಾರಾಗಿದೆ. ರ್ಯಾಪ್ ಹಾಡುಗಳ ಮೂಲಕವೇ ಗಮನ ಸೆಳೆದ ‘ಆಲ್ ಓಕೆ’ ಖ್ಯಾತಿಯ ಅಲೋಕ್ ಈಗ ‘ಮಾರಮ್ಮನ್ ಡಿಸ್ಕೊ’ ಹಾಡಿನ ಮೂಲಕ ಆಗಮಿಸಿದ್ದಾರೆ. ವಿಶೇಷ ಏನೆಂದರೆ 25 ವರ್ಷಗಳ ಹಿಂದೆ ಅದೇ ಡೈಲಾಗ್ನಿಂದಲೇ ಫೇಮಸ್ ಆಗಿದ್ದ ಟೆನ್ನಿಸ್ ಕೃಷ್ಣ, ಈ ಸಿಂಗಲ್ ಹಾಡಿನಲ್ಲೂ ಕಾಣಿಸಿಕೊಂಡಿದ್ದಾರೆ. ಪಾರ್ಟಿ ರೀತಿಯಲ್ಲಿ ಮೂಡಿಬಂದಿರುವ ಹಾಡಿನಲ್ಲಿ ಅಲೋಕ್ ಮತ್ತು ಟೆನ್ನಿಸ್ ಅಷ್ಟೇ ಇಲ್ಲ, ನಟಿ ತಾನ್ಯಾ ಹೋಪ್ ಸಹ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ ಈ ಹಾಡಿಗೆ ನಿರ್ದೇಶನ, ಸಾಹಿತ್ಯ, ಸಂಗೀತ ಮತ್ತು ನಿರ್ವಣದ ಹೊಣೆಯೂ ಅಲೋಕ್ ಅವರದ್ದು. ಹೊಸ ವರ್ಷದ ಪ್ರಯುಕ್ತ ಬಿಡುಗಡೆಯಾದ ‘ಮಾರಮ್ಮನ್ ಡಿಸ್ಕೊ’ ಹಾಡನ್ನು ಈ ವರೆಗೂ 9 ಲಕ್ಷ ಜನ ವೀಕ್ಷಿಸಿದ್ದಾರೆ. ಜ. 6ಕ್ಕೆ ತೆಲುಗು, ತಮಿಳು, ಹಿಂದಿಯಲ್ಲಿಯೂ ಬಿಡುಗಡೆ ಆಗಲಿದೆ. ಇನ್ನೊಂದು ವಿಶೇಷ ಏನೆಂದರೆ, ಎಲ್ಲ ಭಾಷೆಗಳಲ್ಲಿ ಅಲೋಕ್ ಜತೆಗೆ ತಾನ್ಯಾ ಹೋಪ್ ಮತ್ತು ಟೆನ್ನಿಸ್ ಕೃಷ್ಣ ಕಾಣಿಸಲಿದ್ದಾರೆ. ಹಿಂದಿಯಲ್ಲಿ ‘ಮೊಹಲ್ಲೆವಾಲಾ ಡಿಸ್ಕೊ’, ತಮಿಳಿನಲ್ಲಿ ‘ಮಾರಿಯಮ್ಮನ್ ಡಿಸ್ಕೊ’ ಶೀರ್ಷಿಕೆಯಲ್ಲಿ ಹಾಡು ಬಿಡುಗಡೆ ಆಗಲಿದೆ.