

ಕರೊನಾ ವೈರಸ್ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ರೋಗ ಹಬ್ಬಬಾರದು ಎಂದು ಅನೇಕ ದೇಶಗಳು ಕೆಲವು ನಿರ್ಬಂಧ ಹೇರಿವೆ. ವೈರಸ್ನ ಭೀತಿಯಿಂದ ಜನ ಹೊರಗೆ ಓಡಾಡದಂತಾಗಿದೆ. ಈ ಕರೊನಾ ವೈರಸ್ ಬರೀ ಜನರ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರಿಲ್ಲ, ಸಿನಿಮಾ ಉದ್ಯಮದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿದೆ. ಚಿತ್ರೀಕರಣ ಚಟುವಟಿಕೆಗಳಿಂದ, ಚಿತ್ರ ಪ್ರದರ್ಶನದವರೆಗೂ ಸಮಸ್ಯೆಯಾಗಿದೆ. ವೈರಸ್ ಹರಡುವ ಭಯದಿಂದ ಹಲವರು ಶೂಟಿಂಗ್ ಕ್ಯಾನ್ಸಲ್ ಮಾಡಿದರೆ, ಫಾರಿನ್ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಯೋಚಿಸಿದವರು ಲೊಕೇಷನ್ ಶಿಫ್ಟ್ ಮಾಡುತ್ತಿದ್ದಾರೆ. ವೈರಸ್ ಭೀತಿಯಿಂದ ಹಲವರು ಚಿತ್ರಮಂದಿರದತ್ತ ಮುಖ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದರೆ, ಬಾಕ್ಸ್ ಆಫೀಸ್ ಕಲೆಕ್ಷನ್ ಗಣನೀಯವಾಗಿ ಕುಸಿದಿದೆ. ಇನ್ನು ಬಿಡುಗಡೆಗೆ ನಿಗದಿಯಾಗಿರುವ ಚಿತ್ರಗಳೆಲ್ಲ ಮುಂದಕ್ಕೆ ಹೋಗುವ ಮುನ್ಸೂಚನೆ ನೋಡಿ, ಚಿತ್ರರಂಗದ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಒಟ್ಟಾರೆ ಕರೊನಾ ವೈರಸ್ ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಭಾರತೀಯ ಚಿತ್ರರಂಗಕ್ಕೇ ಮಾರಕವಾಗಿದೆ. ಯಾರ್ಯಾರಿಗೆ, ಏನೇನು ಸಮಸ್ಯೆಯಾಗಿದೆ ಎಂಬ ಚಿತ್ರಣ ಇಲ್ಲಿದೆ.
ವಿದೇಶಕ್ಕೆ ಹೋಗದ ಚಿತ್ರತಂಡಗಳು: ದರ್ಶನ್ ನಟನೆಯ ‘ರಾಬರ್ಟ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಚಿತ್ರತಂಡ ಯೂರೋಪ್ಗೆ ಹೋಗುವ ಪ್ಲ್ಯಾನ್ ಮಾಡಿತ್ತು. ಆದರೆ, ಅಲ್ಲೆಲ್ಲ ಕರೊನಾ ಕಾಟ ಇರುವುದರಿಂದ ಚಿತ್ರತಂಡ ಶೂಟಿಂಗ್ ಕ್ಯಾನ್ಸಲ್ ಮಾಡಿ ಇದೀಗ ಗುಜರಾತಿನಲ್ಲಿ ಚಿತ್ರೀಕರಣ ಮಾಡುವ ಯೋಜನೆ ಹಾಕಿಕೊಂಡಿದೆ. ಪುನೀತ್ ರಾಜಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ಹಾಡಿನ ಚಿತ್ರೀಕರಣ ಕೂಡಾ ಕರೊನಾಗೆ ಬಲಿಯಾಗಿದೆ. ಚಿತ್ರತಂಡ ಮಾಡಿದ ಪ್ಲ್ಯಾನಿಂಗ್ ಪ್ರಕಾರ ಇಷ್ಟು ಹೊತ್ತಿಗೆ ಆಸ್ಟ್ರಿಯಾದಲ್ಲಿ ಹಾಡಿನ ಚಿತ್ರೀಕರಣ ಕಂಪ್ಲೀಟ್ ಆಗಬೇಕಿತ್ತು. ಚಿತ್ರತಂಡ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿತ್ತು. ಆದರೆ, ಇದೀಗ ಚಿತ್ರತಂಡ ಫಾರಿನ್ಗೆ ಹಾರುವ ಯೋಚನೆಯನ್ನು ಕೈಬಿಟ್ಟಿದೆ. ಇನ್ನು, ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ನ ‘ಗಾಳಿಪಟ-2’ ಚಿತ್ರತಂಡ ತನ್ನ ಎರಡನೇ ಹಂತದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿತ್ತು. ಎಲ್ಲ ತಯಾರಿಗಳು ಆಗಿ, ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಕರೊನಾದಿಂದ ಪ್ಲಾನ್ ಕ್ಯಾನ್ಸಲ್ ಆಗಿದೆ. ಈ ಕುರಿತು ಮಾತನಾಡುವ ನಿರ್ದೇಶಕ ಯೋಗರಾಜ್ ಭಟ್, ‘ನಾವು ಪ್ಲ್ಯಾನಿಂಗ್ನಂತೆ ವಿದೇಶಕ್ಕೆ ಹೋಗಬೇಕಿತ್ತು. ಆದರೆ ಕರೊನಾ ವೈರಸ್ ಎಲ್ಲ ಕಡೆ ಹಬ್ಬುತ್ತಿರುವ ಕಾರಣ ಸದ್ಯಕ್ಕೆ ಕ್ಯಾನ್ಸಲ್ ಮಾಡಿಕೊಂಡಿದ್ದೇವೆ. ಎಲ್ಲವೂ ಸರಿ ಹೋದ ಮೇಲೆ ಶೂಟಿಂಗ್ ಪ್ಲ್ಯಾನ್ ಮಾಡುತ್ತೇವೆ’ ಎನ್ನುತ್ತಾರೆ.
ಕೇರಳದಲ್ಲಿ ಸಿನಿಮಾ ಶೋಗಳೇ ಕ್ಯಾನ್ಸಲ್: ಬರೀ ಚಿತ್ರೀಕರಣ, ಕಾರ್ಯಕ್ರಮಗಳಷ್ಟೇ ಅಲ್ಲದೇ ಚಿತ್ರ ಪ್ರದರ್ಶನದ ಮೇಲೂ ಕರೊನಾ ವೈರಸ್ ಪರಿಣಾಮ ಬೀರಿದೆ. ಇದರಿಂದಾಗಿ ಕೇರಳದಲ್ಲಿ ಮಾರ್ಚ್ 31ರ ವರೆಗೂ ಯಾವುದೇ ಸಿನಿಮಾಗಳ ಪ್ರದರ್ಶನ ಮಾಡದಂತೆ ಸರ್ಕಾರವೇ ಆದೇಶ ಹೊರಡಿಸಿದೆ. ಕೇರಳದಲ್ಲಿ ಸುಮಾರು 12ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಆ ಸರ್ಕಾರ ಈ ಆದೇಶವನ್ನು ಹೊರಡಿಸಿದೆ. ಇದರಿಂದ ಮೋಹನಲಾಲ್ ನಟನೆಯ ಬಹು ಕೋಟಿ ವೆಚ್ಚದ ‘ಮರಕ್ಕರ್ - ಅರಬ್ಬಿ ಕಡಲಂಟೇ ಸಿಂಹ’ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಇದರ ಜತೆಗೆ ಮಾರ್ಚ್ನಲ್ಲಿ ರಿಲೀಸ್ ಆಗಬೇಕಿದ್ದ ಎಲ್ಲ ಚಿತ್ರಗಳು ಮುಂದೂಡಲ್ಪಟ್ಟಿವೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಹೊಡೆತ: ಕರ್ನಾಟಕದಲ್ಲಿಯೂ ಕರೊನಾ ಬಾಕ್ಸ್ ಆಫೀಸ್ ಮೇಲೆ ತನ್ನ ಕರಿ ನೆರಳನ್ನು ಬೀರಿದೆ. ಈ ಬಗ್ಗೆ ಬೆಂಗಳೂರಿನ ವೀರೇಶ್ ಚಿತ್ರಮಂದಿರದ ಮಾಲೀಕರಾದ ಕೆ.ವಿ. ಚಂದ್ರಶೇಖರ್ ಹೀಗೆ ಹೇಳುತ್ತಾರೆ. ‘ಕರೊನಾದಿಂದ ನಮ್ಮ ಚಿತ್ರಮಂದಿರಗಳ ಕಲೆಕ್ಷನ್ ಶೇ.10ರಷ್ಟು ಕಡಿಮೆಯಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಇದರ ಎಫೆಕ್ಟ್ ಅಷ್ಟೇನೂ ಇಲ್ಲ. ಆದರೆ, ಮಾಲ್ಗಳಲ್ಲಿ ಶೇ.50 ರಷ್ಟು ಹೊಡೆತ ಬಿದ್ದಿದೆ. ಇನ್ನು ಕೇರಳದ ರೀತಿ ನಮ್ಮ ರಾಜ್ಯ ಸರ್ಕಾರವೂ ಏನಾದರೂ ಒಂದಷ್ಟು ದಿನ ಚಿತ್ರಮಂದಿರಗಳನ್ನು ಕ್ಲೋಸ್ ಮಾಡಿ ಎಂದರೆ ನಾವು ರೆಡಿ’ ಎಂದು ಹೇಳುತ್ತಾರೆ.
‘ಸಲಗ’ಕ್ಕಿಲ್ಲ ಕರೊನಾ ಭಯ: ‘ದುನಿಯಾ’ ವಿಜಯ್ ನಿರ್ದೇಶನ ಮಾಡಿ ನಟಿಸುತ್ತಿರುವ ‘ಸಲಗ’ ಸಿನಿಮಾ ಯುಗಾದಿಗೆ ರಿಲೀಸ್ ಆಗಲಿದೆ ಎಂದು ಈ ಹಿಂದೆ ಸುದ್ದಿ ಆಗಿತ್ತು. ಆದರೆ, ಈಗ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ. ಕರೊನಾ ಭಯದಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ ಎಂಬ ವಿಷಯವನ್ನು ನಿರಾಕರಿಸಿರುವ ನಿರ್ವಪಕ ಕೆ.ಪಿ. ಶ್ರೀಕಾಂತ್, ‘ತಾಂತ್ರಿಕ ಕಾರಣಗಳಿಂದ ಚಿತ್ರ ಸ್ವಲ್ಪ ತಡವಾಯಿತು.
ಆತಂಕದ ಮಧ್ಯೆ ಶೂಟಿಂಗ್: ಸಾಕಷ್ಟು ಮಂದಿ ತಮ್ಮ ಚಿತ್ರೀಕರಣ ಕೆಲಸಗಳನ್ನು ಕರೊನಾ ಭಯದಿಂದ ಮುಂದೂಡಿದರೆ, ರಕ್ಷಿತ್ ಶೆಟ್ಟಿ ನಾಯಕತ್ವದ ‘ಚಾರ್ಲಿ’ಚಿತ್ರತಂಡ ಮಾತ್ರ ಉತ್ತರ ಭಾರತದ ಕೆಲವೆಡೆ ಶೂಟಿಂಗ್ ಮಾಡುತ್ತಿದೆ. ರಾಜಸ್ಥಾನ, ಪಂಜಾಬ್ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ನಿರ್ಭಯವಾಗಿ ಶೂಟಿಂಗ್ ಮಾಡುತ್ತಿದ್ದಾರೆ. ಇದರ ಜತೆಗೆ ಸುದೀಪ್ ನಟನೆಯ ‘ಫ್ಯಾಂಟಮ್, ಧನಂಜಯ ನಿರ್ಮಾಣ ಮಾಡುತ್ತಿರುವ ‘ಬಡವ ರ್ಯಾಸ್ಕಲ್’ ಸೇರಿದಂತೆ ಸಾಕಷ್ಟು ಚಿತ್ರಗಳು ನಿರಾತಂಕವಾಗಿ ಶೂಟಿಂಗ್ನಲ್ಲಿ ತೊಡಗಿಸಿಕೊಂಡಿವೆ.
ಟೈಟಲ್ ಆದ ಕರೊನಾ: ಇನ್ನು ಕರೊನಾ ಎಂಬ ಮಹಾಮಾರಿಯ ಖ್ಯಾತಿ ಎಷ್ಟಾಗಿದೆ ಎಂದರೆ, ಆ ಹೆಸರಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಲು ಅರ್ಜಿ ಹಾಕಲಾಗಿದೆ. ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ನಿರ್ವಪಕ ಉಮೇಶ್ ಬಣಕಾರ್ ಅವರೇ ಈ ಅರ್ಜಿಯನ್ನು ಹಾಕಿದ್ದಾರೆ. ಅರ್ಜಿಯಲ್ಲಿ ಇದನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣ ಮಾಡುವುದಾಗಿ ಅವರು ತಿಳಿಸಿದ್ದು, ಕನ್ನಡದಲ್ಲಿ ‘ಕರೊನಾ’ ಹಿಂದಿಯಲ್ಲಿ ‘ಡೆಡ್ಲಿ ಕರೊನಾ’ಎಂಬ ಟೈಟಲ್ ಕೊಡಿ ಎಂದಿದ್ದಾರೆ. ಚಿತ್ರದ ಸೆನ್ಸಾರ್ ಇನ್ನಷ್ಟೇ ಆಗಬೇಕು, ಅರ್ಜಿ ಸಲ್ಲಿಸಿದ್ದೇವೆ. ಅದು ಕ್ಯೂ ಪ್ರಕಾರ ಆಗುತ್ತದೆ. ಒಮ್ಮೆ ಸೆನ್ಸಾರ್ ಆದ ಮೇಲೆ ರಿಲೀಸ್ ಡೇಟ್ ಘೋಷಿಸುತ್ತೇನೆ. ಇನ್ನು ನಮ್ಮ ‘ಸಲಗ’ ಸಿನಿಮಾಗೆ ಯಾವುದೇ ಕರೊನಾ ಭಯ ಇಲ್ಲ. ರಿಲೀಸ್ ಡೇಟ್ ಮುಂದಕ್ಕೆ ಹೋದರೆ ಅದಕ್ಕೆ ತಾಂತ್ರಿಕ ಕಾರಣಗಳಷ್ಟೇ ಹೋರತು ಕರೊನಾ ಅಲ್ಲ’ಎನ್ನುತ್ತಾರೆ ಅವರು.
ಬಾಲಿವುಡ್, ಹಾಲಿವುಡ್ನಲ್ಲೂ ಆತಂಕ: ಕರೊನಾ ಆತಂಕ ಬರೀ ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ, ಹಾಲಿವುಡ್, ಬಾಲಿವುಡ್ನಲ್ಲಿಯೂ ಇದರ ಎಫೆಕ್ಟ್ ಜೋರಾಗಿದೆ. ವೆನಿಸ್ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ‘ಮಿಷನ್ ಇಂಪಾಸಿಬಲ್ -7’ ಚಿತ್ರೀಕರಣ ಕರೊನಾ ಭಯದಿಂದಾಗಿ ರದ್ದಾಗಿದೆ. ದೀಪಿಕಾ ಪಡುಕೋಣೆ ಸೇರಿದಂತೆ ಸ್ಟಾರ್ ನಟರ ಎಷ್ಟೋ ಚಿತ್ರಗಳು ಶೂಟಿಂಗ್ ರದ್ದು ಪಡಿಸಿವೆ. ಆದರೆ ಪ್ರಭಾಸ್ ಮಾತ್ರ ಮಾಸ್ಕ್ ಹಾಕಿಕೊಂಡು ವಿದೇಶ ಪ್ರಯಾಣ ಮಾಡಿ ಎಲ್ಲರನ್ನು ದಂಗು ಬಡಿಸಿದ್ದರು.
ಸೆಲಬ್ರಿಟಿಗಳ ಜಾಗೃತಿ: ಕರೊನಾ ವೈರಸ್ನಿಂದಾಗ ಶೂಟಿಂಗ್ ರದ್ದಾಗಿ ಒಂದಷ್ಟು ತೊಂದರೆ ಆಗಿದ್ದರೂ, ನಟ-ನಟಿಯರೆಲ್ಲರೂ ರೋಗದ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಸಾಕಷ್ಟು ಜನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಸ್ಟೇಟಸ್ಗಳನ್ನು ಹಾಕಿಕೊಳ್ಳುತ್ತ ಜನರನ್ನು ಎಚ್ಚರಿಸುತ್ತಿದ್ದಾರೆ.
ಲೋಕಲ್ನಲ್ಲಿ ಎಫೆಕ್ಟ್ ಇಲ್ಲ: ‘ವಿದೇಶದಲ್ಲಿ ನಡೆಯುತ್ತಿರುವ ಚಿತ್ರೀಕರಣಗಳಷ್ಟೇ ಸದ್ಯಕ್ಕೆ ರದ್ದಾಗಿರುವುದು, ಲೋಕಲ್ನಲ್ಲಿ ನಡೆಯುತ್ತಿರುವ ಎಲ್ಲ ಚಿತ್ರೋದ್ಯಮದ ಕೆಲಸಗಳು ಸಾಂಗವಾಗಿ ನಡೆಯುತ್ತಿವೆ. ಜತೆಗೆ ನಮಗೆ ಸರ್ಕಾರದಿಂದ ಚಿತ್ರಪ್ರದರ್ಶನಗಳನ್ನು ನಿಲ್ಲಿಸುವಂತೆ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ. ಹಾಗೇನಾದರೂ ಬಂದರೆ ಅದನ್ನು ನಾವು ಕೂತು ರ್ಚಚಿಸಿ ತೀರ್ಮಾನ ಮಾಡುತ್ತೇವೆ’ಎನ್ನುತ್ತಾರೆ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈ ರಾಜ್.
ಈ ವಾರು ಮೂರು ರಿಲೀಸ್: ಜನ ಸೇರುತ್ತಿಲ್ಲ, ಥಿಯೇಟರ್ನಲ್ಲಿ ಕಲೆಕ್ಷನ್ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಈ ವಾರ ಮೂರು ಕನ್ನಡ ಚಿತ್ರಗಳು ಬಿಡುಗಡೆಯಾಗುತ್ತಿವೆ. ಚಿರಂಜೀವಿ ಸರ್ಜಾ ನಟನೆಯ ‘ಶಿವಾರ್ಜುನ’, ರಕ್ಷ್ ಅಭಿನಯದ ‘ನರಗುಂದ ಬಂಡಾಯ’, ಹೊಸಬರ ‘5 ಅಡಿ 7 ಅಂಗುಲ’ಚಿತ್ರಗಳು ನೂರಾರು ಚಿತ್ರಮಂದಿರದಲ್ಲಿ ರಿಲೀಸ್ ಆಗುತ್ತಿವೆ.
ಒಟ್ಟಿನಲ್ಲಿ ಒಂದು ಮಾರಕ ವೈರಸ್ ಚಿತ್ರರಂಗವನ್ನು ಒಂದು ರೀತಿಯಲ್ಲಿ ಶೇಕ್ ಮಾಡುತ್ತಿದೆ ಎನ್ನಬಹುದು.
|ಹರೀಶ್, ಬೆಂಗಳೂರು