

ಬೆಂಗಳೂರು: ಕರೊನಾ ಭೀಕರತೆ ದಿನೇದಿನೆ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಇತ್ತ ಸಿನಿಮಾಕ್ಷೇತ್ರದವರೂ ಒಂದಲ್ಲ ಒಂದು ರೀತಿಯಲ್ಲಿ ಕರೊನಾ ಕುರಿತು ತಿಳಿಹೇಳುವ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಮತ್ತು ಸಂಗೀತ ನಿರ್ದೇಶಕ ಅನೂಪ್ ಸಿಳೀನ್ ಕರೊನಾ ಸಾಂಗ್ ಕಂಪೋಸ್ ಮಾಡಿ ಯೂಟ್ಯೂಬ್‌ಗೆ ಬಿಟ್ಟಿದ್ದರು. ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿತ್ತು. ಈಗ ನಿರ್ದೇಶಕ ಪವನ್ ಒಡೆಯರ್ ಮತ್ತು ನಟ ಪ್ರಥಮ್ ಹೊಸ ಶೈಲಿಯ ಕರೊನಾ ಹಾಡಿಗೆ ಕೈ ಜೋಡಿಸಿದ್ದಾರೆ.
‘ಇಂಡಿಯಾಗೂ ಬಂದೇ ಬಿಡ್ತು ನೋಡಿ ಕರೊನಾ, ಕರ್ನಾಟಕ ಬಂದ್ ಮಾಡೇ ಬಿಡ್ತು ಹಮ್ ಕ್ಯಾ ಕರೊನಾ, ಸಬ್ ಕ್ಯಾ ಕರೊನಾ..’ ಸಾಹಿತ್ಯವುಳ್ಳ ಹಾಡಿಗೆ ಪವನ್ ಒಡೆಯರ್ ಧ್ವನಿ ನೀಡಿದರೆ, ‘ಎಲ್ರೂ ಅಟೆನ್ಷನ್ ಪ್ಲೀಸ್.. ಇಡೀ ಇಂಡಿಯಾಗೆ ಕರೊನಾ ಬಂದ್ಬಿಟೈತೆ ಆಲ್ರೆಡಿ, ಮನೇಲಿ ಕೈ ತೊಳ್ಕೊಂಡು ಮಲ್ಕೊಳಿ, ಕರೊನಾ ಧ್ಯಾನ ಮಾಡಿ, ಯಾರೂ ಆಚೆ ಬರಬೇಡಿ..’ ಎಂಬ ಡೈಲಾಗ್‌ಗಳಿಗೆ ಪ್ರಥಮ್ ಧ್ವನಿ ನೀಡಿದ್ದಾರೆ. ಕರೊನಾ ಭಯ ಬೇಡ, ಸ್ವಚ್ಛತೆ ಇರಲಿ ಎಂಬ ಸಂದೇಶವನ್ನೂ ಈ ಹಾಡಿನಲ್ಲಿ ಹೇಳಲಾಗಿದೆ. ಅಂದಹಾಗೆ, ಈ ಹಾಡಿಗೆ ಹರಿಕಾವ್ಯ ಸಂಗೀತ ನೀಡಿದ್ದು, ರಾಹುಲ್ ಸುಕಿರಣ ಸಾಹಿತ್ಯ ಒದಗಿಸಿದ್ದಾರೆ. ಮಹೇಂದ್ರ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದು, ಸುಕಿರಣ ವಿಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಗೀತೆ ಲಭ್ಯವಿದೆ.