

ಬೆಂಗಳೂರು: ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮೇ 03ರ ಭಾನುವಾರದಂದು 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಯಬೇಕಿತ್ತು. ಇಷ್ಟರಲ್ಲಾಗಲೇ ಪ್ರಶಸ್ತಿಗಳು ಸಹ ಘೋಷಣೆಯಾಗಿರಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ.
ಮೊದಲೆಲ್ಲಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭಕ್ಕೆ ನಿರ್ದಿಷ್ಟವಾದ ದಿನಾಂಕವಿರಲಿಲ್ಲ. ಆದರೆ, 2013ರಲ್ಲಿ ಭಾರತೀಯ ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಭಾರತದ ಮೊದಲ ಚಿತ್ರ ‘ರಾಜ ಹರಿಶ್ಚಂದ್ರ’ ಬಿಡುಗಡೆಯಾದ ಮೇ 3ರಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ನಡೆಸಲು ಉದ್ದೇಶಿಸಲಾಯಿತು. ಅದರಂತೆ ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿ, ಮೇ 3ರಂದು ಪ್ರಶಸ್ತಿ ನೀಡುವ ಪರಿಪಾಠ ಪ್ರಾರಂಭವಾಯಿತು.
ಎರಡು ವರ್ಷಗಳಿಂದ ಹಳಿ ತಪ್ಪಿದೆ: ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಸತ್ ಚುನಾವಣೆಗಳಿದ್ದ ಕಾರಣ, ಪ್ರಶಸ್ತಿ ಆಯ್ಕೆ, ಘೋಷಣೆ ಮತ್ತು ವಿತರಣೆಯಲ್ಲಿ ವಿಳಂಬವಾಯಿತು. ಈ ವರ್ಷ ಕರೊನಾ ಮತ್ತು ಲಾಕ್ಡೌನ್ನಿಂದ ಮತ್ತೊಮ್ಮೆ ಪ್ರಶಸ್ತಿ ಪ್ರದಾನ ಸಮಾರಂಭ ವಿಳಂಬವಾಗಲಿದೆ. ಮೂಲಗಳ ಪ್ರಕಾರ, ಪ್ರಶಸ್ತಿ ಆಯ್ಕೆ ಸಮಿತಿಯೇ ಇನ್ನೂ ಆಯ್ಕೆಯಾಗಿಲ್ಲ. ಲಾಕ್ಡೌನ್ ಮುಗಿದ ನಂತರ ಮೊದಲಿಗೆ ಆಯ್ಕೆ ಸಮಿತಿಗೆ ಸದಸ್ಯರು ಆಯ್ಕೆಯಾಗಿ, ಅವರು ಚಿತ್ರಗಳನ್ನು ನೋಡಿ, ಆ ನಂತರ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕೆಲ್ಲಾ ಮುಂದಿನ ಐದಾರು ತಿಂಗಳಾದರೂ ಬೇಕು. ಬಹುಶಃ ಈ ವರ್ಷದ ಕೊನೆಯ ಅಥವಾ ಮುಂದಿನ ವರ್ಷ ಆರಂಭದಲ್ಲಿ ಸಮಾರಂಭ ನಡೆಯುವ ಸಾಧ್ಯತೆ ಇದೆ.
ರಾಜ್ಯ ಮಟ್ಟದಲ್ಲೂ ಇದೇ ಸಮಸ್ಯೆ: ಇದು ಬರೀ ರಾಷ್ಟ್ರ ಮಟ್ಟದ ಮಾತಲ್ಲ, 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಸಹ ವಿಳಂಬವಾಗುತ್ತವೆ. ರಾಷ್ಟ್ರ ಮಟ್ಟದಲ್ಲಿ ಮೇ 03ರಂದು ಹೇಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಪರಿಪಾಠ ಇದೆಯೋ, ರಾಜ್ಯ ಮಟ್ಟದಲ್ಲಿ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬದ ನೆನಪಲ್ಲಿ ಏಪ್ರಿಲ್ 24ರಂದು ನಡೆಸಬೇಕು ಎಂಬ ತೀರ್ವನವನ್ನು ಕೆಲವು ವರ್ಷಗಳ ಹಿಂದೆಯಷ್ಟೇ ತೆಗೆದುಕೊಳ್ಳಲಾಯಿತು. ಅದರಂತೆ 2016ನೇ ಸಾಲಿನ ಪ್ರಶಸ್ತಿಗಳನ್ನು 2017ರ ಏಪ್ರಿಲ್ 24ರಂದು ಪ್ರದಾನ ಮಾಡಲಾಯಿತು. 2017ನೇ ಸಾಲಿನ ಪ್ರಶಸ್ತಿ ಆಯ್ಕೆ ಮತ್ತು ವಿತರಣೆಯಲ್ಲಿ ವಿಳಂಬವಾಯಿತು. ಇನ್ನು 2018ನೇ ಸಾಲಿನ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಈ ವರ್ಷದ ಆರಂಭದಲ್ಲಿ ಪ್ರಕಟಿಸಲಾಯಿತು.
ಎರಡು ವರ್ಷದ್ದು ಬಾಕಿ: ಹೀಗೆ 2017 ಮತ್ತು 2018ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭ ಬಾಕಿ ಇದೆ. ಈ ಮಧ್ಯೆ 2019ನೇ ಸಾಲಿನ ಪ್ರಶಸ್ತಿಗೆ ಅರ್ಹರ ಆಯ್ಕೆ ಪ್ರಕ್ರಿಯೆ ಇಷ್ಟರಲ್ಲಿ ಶುರುವಾಗಬೇಕಿತ್ತು. ಆದರೆ, ಕರೊನಾ ಮತ್ತು ಲಾಕ್ಡೌನ್ನಿಂದಾಗಿ, ಇವೆಲ್ಲಾ ಮುಗಿದ ಮೇಲೆ ಪ್ರಕ್ರಿಯೆ ಶುರವಾಗುವ ಸಾಧ್ಯತೆ ಇದೆ. ಮೊದಲಿಗೆ ಎರಡು ವರ್ಷಗಳ ಪ್ರಶಸ್ತಿ ಸಮಾರಂಭ ನಡೆಸಿ, ಆ ನಂತರ 2019ರ ಸಾಲಿನ ಆಯ್ಕೆ ಪ್ರಕ್ರಿಯೆ ನಡೆಯುತ್ತದೋ ಅಥವಾ ಆಯ್ಕೆ ಪ್ರಕ್ರಿಯೆ ಎಲ್ಲಾ ಮುಗಿಸಿ, ಒಂದೇ ಬಾರಿಗೆ ಮೂರು ವರ್ಷಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಒಂದೇ ವೇದಿಕೆಯಲ್ಲಿ ಮಾಡಲಾಗುತ್ತದೋ ಎಂಬ ಕುತೂಹಲ ಎಲ್ಲರಿಗೂ ಇದೆ. ಏನೇ ಆದರೂ, ಇವೆಲ್ಲಾ ಆಗುವುದಕ್ಕೆ ಮುಂದಿನ ಆರೇಳು ತಿಂಗಳಾದರೂ ಬೇಕು. ಬರೀ ಪ್ರಶಸ್ತಿ ಸಮಾರಂಭಗಳಷ್ಟೇ ಅಲ್ಲ, ಜಗತ್ತಿನಾದ್ಯಂತ ಚಿತ್ರೋತ್ಸವಗಳು ರದ್ದಾಗಿವೆ. ಕಾನ್ಸ್ ಚಿತ್ರೋತ್ಸವವು ಮೇ 12ರಿಂದ 23ರವರೆಗೂ ನಡೆಯಬೇಕಿತ್ತು. ಕರೊನಾದಿಂದಾಗಿ ಅದು ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿದ್ದು, ಜೂನ್ನಿಂದ ನಡೆಯಬೇಕಿದ್ದ ಚಿತ್ರೋತ್ಸವಗಳು ನಡೆಯುತ್ತವಾ ಅಥವಾ ಮುಂದೂಡಲ್ಪಡುತ್ತವಾ ಎಂದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.